ಬರಿಯ ಮೆಯ್ಯ ಹೆಮ್ಮೆ ತಪ್ಪು!
ಕಣ್ಣಿಗಲ್ಲ ಎದೆಗೆ ಚೆಲುವು,
ತರಳೆ, ತಿಳಿಯದೆ?
ಅಳಿಯಲೊಡನೆ ಹೃದಯದೊಲವು
ಚೆಲುವು ಉಳಿವುದೆ?
ಒಡಲ ಸೊಂಪು, ನುಡಿಯ ಇಂಪು,
ಕಣ್ಣು, ಮೂಗು, ಗಲ್ಲ, ಕೆನ್ನೆ,
ಒಡವೆ, ಸೀರೆ ಎಲ್ಲ, ನೀರೆ,
ಒಲುಮೆಯಿಲ್ಲದಿರಲು ಬರಿಯ
ಸಿಪ್ಪೆ! ಹೊಳ್ಳು! ಸಪ್ಪೆ! ಸೊನ್ನೆ!
ಅಡಿಯ ಸಿರಿಗೆ ಹೊನ್ನ ಗೆಜ್ಜೆ
ಸಿಂಗಾರದ ಕೃತಿ ;
ನುಡಿಯ ಸಿರಿಗೆ ಬಗೆಯ ಬಿಜ್ಜೆ
ಕಲೆಯ ಸಂಸ್ಕೃತಿ.
ಮೆಯ್ಯ ಸಿರಿಯ ಬಹಳ ನೆಚ್ಚಿ
ಎದೆಯ ಮರೆಯಬೇಡ, ಹುಚ್ಚಿ!
ಚೆಲುವನೆಲ್ಲ ಕದಿಯೆ ಮುಪ್ಪು
ಒಲುಮೆಯೊಂದೆ ಬದುಕಿಗುಪ್ಪು!
ಬರಿಯ ಮೆಯ್ಯ ಹೆಮ್ಮೆ ,- ತಪ್ಪು!
- ಕುವೆಂಪು
' ಜೇನಾಗುವಾ '
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ