ಗುರುವಾರ, ನವೆಂಬರ್ 11, 2010

ರವಿಗೆ ಕವಿಯ ಸರಸ ನಿಂದೆ


ಅದೊ ಬಂದನೊಂದಿನಿತು ತಡವಿಲ್ಲ! ಓ ರವಿ,
ಕೆಲಸವಲ್ಲದೆ ಬೇರೆ ಕೆಲಸವಿಲ್ಲವೆ ನಿನಗೆ?
ಅಥವಾ ಹಿಡಿದಿದೆಯೆ ಕರ್ತವ್ಯದ ಪಿಶಾಚಿ?
ಸ್ವಾತಂತ್ರವಿಲ್ಲದಾ ಯಂತ್ರ ಜೀವವ ಸುಡಲಿ!
ನೀನು ಬಾಹಿರನಲಾ ಸೋಮಾರಿತನವೆಂಬ
ರಸಿಕತೆಗೆ! - ರಸಿಕತೆಯೇ? ನಿನಗೆ ರಸಿಕತೆಯೆಲ್ಲಿ,
ಶ್ರಮಜೀವಿ? - ನಳಿ ತೋಳ್ ಸೆರೆಯೊಳಪ್ಪಿ, ತಡಮಾಡಿ
ಕಳುಹುವಾ ನಲ್ಲೆಯಿಲ್ಲವೆ ನಿನಗೆ? ಅಥವಾ
ಬರಿ ಬಣಗು ಬ್ರಹ್ಮಚಾರಿಯೊ ನೀನು? ಹಾಗಿದ್ದರೆ
ಬುದ್ಧಿ ಹೇಳುವೆ ಕೇಳು : ಬೇಗನೆ ಮದುವೆಯಾಗು!
ಉಷೆಯ ಊರೊಳು ಇನಿತು ತಳುವಿ ಬರಬಹುದಂತೆ! -

ಕವಿ, ಮೊದಲು, (ಮದುವೆಯಾಗುವ ಮೊದಲು), ನಿನ್ನನಾ
ಗಿರಿಶಿಖರದಲಿ ಇದಿರುಗೊಳುತಿದ್ದನ್ ; ಇಂದೇಕೆ
ತಳುವಿದನು? ಎಂದು ಕಿಟಕಿಯೊಳಿಣಿಕಿ ನೋಡುವೆಯಾ
ಕೋಣೆಯನು? ! ನಿನ್ನ ನಾಣಿಲಿತನಕೆ ಬೆಂಕಿ!
ಆವಾವ ವೇಷದಲಿ, ಆವಾವ ರೂಪದಲಿ,
ಆರಾರು ಆರಾರೊಡನೆ ಎಂತು ಎಂತಿಹರೆಂದು
ಆವುದನು ಲೆಕ್ಕಿಸದೆ ಕಂಡಿಯಲಿ ಬಂದಿಣಿಕಿ  
ನೋಡುವರೆ? - ನೋಡುವರೆ ನಿನ್ನಂಥ ದೊಡ್ಡವರು?
ನಿನ್ನ ಹಿರಿಮೆಗಿದು ತಕ್ಕುದೆ ಹೇಳು! - ಹೋಗಾಚೆ!
ಮುಚ್ಚಿದರವಿಂದದಲರನು ಬಿಚ್ಚು. ನಾನೊಲ್ಲೆ ;
ನಮ್ಮಪ್ಪುಗೆಯ ತಾವರೆಯ ಸಿರಿಯ ತೋಳ್ಸೆರೆಯ
ಮೊಗ್ಗನಲರಿಸಲೊಲ್ಲೆ! - ನಿದ್ದೆಯಿಲ್ಲದ ನಲ್ಲೆ
ಬಳಲಿ ಮಲಗಿಹಳೋ! ಎಚ್ಚರಿಸದಿರ್ ; ಎಚ್ಚರಿಕೆ!
ಮತ್ತೆಲ್ಲಿಯಾದರೂ ನನ್ನ ನಿನ್ನಯ ನೇಹ
ಕೆಟ್ಟೀತು! ಬಿರುಕು ಬಿಟ್ಟೀತು! ಸುಟ್ಟುರಿದೀತು!...

ಶುದ್ಧ ಭಂಡನೋ ನೀನು! ಎಷ್ಟು ಹೇಳಿದರೇನು?
ಮತ್ತೆ ಮತ್ತೆಯು ಹೊಳಪನುಕ್ಕಿಸಿ ನಗುವೆಯೇನು?

                                                         - ಕುವೆಂಪು
                                                            ' ಜೇನಾಗುವಾ '


2 ಕಾಮೆಂಟ್‌ಗಳು:

ಜೋಗಿತಿ ಹೇಳಿದರು...

ಕುವೆಂಪು ಅವರ ಅಪರೂಪದ ಕಾವ್ಯಗಳ ಉಣಿಸಿದ ನಿಮಗೆ ಧನ್ಯವಾದಗಳು. ಅವರ ಬದುಕು ಅದು ಜೇನಿನ ಮಳೆಯಂತದ್ದು... ಅದರ ಅಂದವೇ ಈ ಸಾಲುಗಳು...
ಅಂದದ ಬ್ಲಾಗ್. ಮತ್ತೆ ಬರುತ್ತೇನೆ...

ಕನಸು.. ಹೇಳಿದರು...

ಧನ್ಯವಾದಗಳು.. ಅಕ್ಕರೆ ಹೀಗೆ ಇರಲಿ..