ಮಂಗಳವಾರ, ಡಿಸೆಂಬರ್ 14, 2010

ಕುರುಡು ಕಾಂಚಾಣ

ಕುರುಡು ಕಾಂಚಾಣ ಕುಣಿಯುತಲಿತ್ತು I
ಕಾಲಿಗೆ ಬಿದ್ದವರ ತುಳಿಯುತಲಿತ್ತೋ II
                            ಕುರುಡು ಕಾಂಚಾಣ II ಪಲ್ಲ II

ಬಾಣಂತಿಯೆಲುಬ ಸಾ -
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೊ ;

ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ ;

ಬಡವರ ಒಡಲಿನ
ಬಡಬಾsನಲದಲ್ಲಿ  
ಸುಡು ಸುಡು ಪಂಜು ಕೈಯೊಳಗಿತ್ತೊ;

ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ -
ದುಂಬಿದಂತುಧೊ ಉಧೊ ಎನ್ನುತಲಿತ್ತೊ ;

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ ;

ಗುಡಿಯೊಳಗೆ ಗಣಣ, ಮಾ -
ಹಡಿಯೊಳಗೆ ತನನ, ಆಂ -
ಗಡಿಯೊಳಗ ಝಣಣಣ ನುಡಿಗೊಡುತಿತ್ತೋ ;


ಹ್ಯಾಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

                                      - ದ.ರಾ. ಬೇಂದ್ರೆ
                                          ' ನಾದಲೀಲೆ '

10 ಕಾಮೆಂಟ್‌ಗಳು:

Ananda_KMR ಹೇಳಿದರು...

nimage ee padyada artha gotthideya...?

Ananda_KMR ಹೇಳಿದರು...

mukhyavaagi nanage goth aagde iddaddu

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ ;

artha gothilla...

ಕನಸು.. ಹೇಳಿದರು...

'ನಾದಲೀಲೆ' ಕವನ ಸಂಕಲನದಲ್ಲಿ ಪ್ರತಿ ಕವನದ ಭಾವ ಸಂದರ್ಭವನ್ನು ಕುರಿತಾದ ಟಿಪ್ಪಣಿ ಇದೆ. 'ಕುರುಡು ಕಾಂಚಾಣ'ದ ಭಾವ ಸಂದರ್ಭ ಹೀಗಿದೆ, ನೋಡಿ. ಕವಿತೆಯ ಸಾರಾಂಶ ಅರ್ಥವಾಗುತ್ತದೆ.

" ಮಹಾಲಕ್ಷ್ಮಿಯ ಉಪಾಸಕರು ಎನಿಸಿಕೊಳ್ಳುವ ಗೊಂದಲಿಗರು ಬಡವರಿಂದಲೂ ಒಂದು ಕಾಸನ್ನು ಕೊಸರಿಕೊಳ್ಳಲು ಹೆಣಗುತ್ತಾರೆ; ಕುಣಿಯುತ್ತಾರೆ. ಬಾಣಂತಿಯರ ಸಾವು, ಚಿಕ್ಕ ಮಕ್ಕಳ ಬಲಿ, ಬಡವರ ಹೊಟ್ಟೆಯುರಿ, ಕಣ್ಣೀರು, ದುಡಿಮೆಗಾರರ ಬಾಯಿಗೆ ಬೀಳುವ ಮಣ್ಣು - ಇವೆಲ್ಲವೂ ಹಣದ ಹಂಚಿಕೆ ಜಗತ್ತಿನಲ್ಲಿ ಸರಿಯಾಗಿಲ್ಲ ಎಂದು ಕೂಗುತ್ತಿವೆ. ಜಗತ್ತಿನಲ್ಲಿ ಹಣ ಕಡಿಮೆಯಾಗಿಲ್ಲ. ಗುಡಿ, ಮಹಡಿ, ಅಂಗಡಿಗಳಲ್ಲಿ ಅದರ ಧ್ವನಿ ಕೇಳಿಬರುತ್ತಿದೆ. ಕಾಂಚಾಣಕ್ಕೆ ಕಣ್ಣಿಲ್ಲ ಇದೇ ನಿಜ. ಅಂದರೆ ಕಾಂಚಾಣವುಳ್ಳವರಿಗೆ ಕಣ್ಣು ಬರಬೇಕಾಗಿದೆ. ಈ ಹೊಸ ದೃಷ್ಟಿ ಉದಯವಾಗುವವರೆಗೆ ಕಾಂಚಾಣದ ಕಾಲಿಗೆ ಬೀಳುವವರ ಸಂಖ್ಯೆಯೂ ಕಡಿಮೆಯಾಗುವುದಿಲ್ಲ. ಅದು ತನ್ನ ಕುರುಡುತನದಲ್ಲಿ ತುಳಿಯುವ ಕೃತ್ಯವನ್ನು ನಿಲ್ಲಿಸುವುದಿಲ್ಲ. "

ಕನಸು.. ಹೇಳಿದರು...

ಈ ಕವನದಲ್ಲಿ ಕಾಂಚಾಣ(ಹಣ)ವನ್ನು ಕುರುಡೆಂದು ಪರಿಗಣಿಸಲಾಗಿದೆ. ಅದು ಕಾಲಿಗೆ ಸಿಕ್ಕವರನ್ನು ತುಳಿಯುತ್ತ ತನ್ನ ದೌರ್ಜನ್ಯವನ್ನು ಮೆರೆಯುತ್ತಿದೆ. ಅದರ ಭೀಕರ ರೂಪ ಹೇಗಿದೆ ಎಂಬುದನ್ನು ಇಲ್ಲಿ ಕವಿ ವರ್ಣಿಸಿದ್ದಾರೆ : ಕಾಲಿನ ಕಿರುಗೆಜ್ಜೆ, ಕೊರಳೊಳಗಿನ ಜೋಮಾಲೆ, ಕೈಯೊಳಗಿನ ಪಂಜು, ಹಣೆಯಲ್ಲಿನ ಭಂಡಾರ, ಮೈದುಂಬಿ ಉಧೊ ಎನ್ನುವ ರೀತಿ...ನೀವು ಕೇಳಿದ ಸಾಲುಗಳು ಅದರ ರೂಪವನ್ನು ವರ್ಣಿಸುತ್ತಾ ಹೇಳಿದಂತಹವು:

ಕೂಲಿ (ಕೂಲಿ-ಕುಂಬಳಿ ಜೋಡಿಪದ) ಜನರ ಮೈ ಚರ್ಮದ ಧೂಳು ಆ ಕುರುಡು ಕಾಂಚಾಣದ ಹಣೆಯಲ್ಲಿ ಭಂಡಾರ(ವಿಭೂತಿ, ಗಂಧ ಮೊದಲಾದ ದೇವರ ಪ್ರಸಾದ ಎಂದರ್ಥ) ವಾಗಿತ್ತು.ಆದರೆ ಕವಿತೆಯ ಕೊನೆಗೆ, ಪು.ತಿ.ನ.ರವರು ಹೇಳುವಂತೆ " ಹಣದ ದುರ್ವೈಭವವನ್ನು ಜಾಲಾಡಿ ಕೊನೆಯಲ್ಲಿ ಎತ್ತಿಹಾಕಿ ಧ್ವಂಸ ಮಾಡಲಾಗಿದೆ"ಅರ್ಥವಾಗಿರಬಹುದೆನ್ನಿಸುತ್ತದೆ.ಪ್ರತಿಕ್ರಿಯಿಸಿ,

ಕನಸು.

Unknown ಹೇಳಿದರು...

ಇವತ್ತಿಗೂ ಪ್ರಸ್ತುತವಾದ ಪದ್ಯ...ಕಾಂಚನದ ರಾಕ್ಷಸಿ ಕೃತ್ಯದ ಹಾರಾಟ ಕೊನೆಗೊಳ್ಳುವ ಕಾಲ ಬೇಗ ಬರಲಿ. Thanks for sharing

Unknown ಹೇಳಿದರು...

ಕವಿತೆ ಭಾವಾರ್ಥ ತಳಿಸಿ

Unknown ಹೇಳಿದರು...

ಕವಿತೆ ಭಾವಾರ್ಥ ತಳಿಸಿ

Unknown ಹೇಳಿದರು...

ಇದು ನನ್ನ ಅತೀ ಇಷ್ಟವಾದ ಹಾಡು ಹಣ ದ ರಾಕ್ಸ್ಗಸಿ ಗುಣಗಳನ್ನು ಬೆಂದ್ರೆ ಅಜ್ಜನವರು ಸೊಗಸಾಗಿ ತಿಳಿಸಿದ್ದಾರೆ ಹಾಗೂ ಈ ರೀತಿಯ ಉತ್ತಮ ಹಾಡುಗಳ ಬ್ಲಾಗ್ ಮಾಡುವ ಮೂಲಕ ಕನ್ನಡದ ಆಧುನಿಕತೆಗೆ ಹಾಗೂ ಕನ್ನಡದ ಬೆಳವಣಿಗೆಗೆ ತಮ್ಮ ಶ್ರಮಕ್ಕೆ ನನ್ನ ನಮನಗಳು

ನನ್ನೊಳಗ ನೀನು ಹೇಳಿದರು...

ದುರ್ವೈಭವವನ್ನ ಜಾಲಾಡಿ ಕೊನೆಯಲ್ಲಿ ಎತ್ತಿಹಾಕಿ ಎನ್ನುವ ಕ್ರಾಂತಿಕಾರಕ ಬದಲಾವಣೆ ಹೆಚ್ಚು ಮಹತ್ವದ್ದು.ಅಷ್ಟೇ ತಾತ್ತ್ವಿಕ ಪ್ರಜ್ಞೆ ಕಟ್ಟಿಕೊಡುತ್ತದೆ. ಧನ್ಯವಾದಗಳು

ನನ್ನೊಳಗ ನೀನು ಹೇಳಿದರು...

ದುರ್ವೈಭವವನ್ನ ಜಾಲಾಡಿ ಕೊನೆಯಲ್ಲಿ ಎತ್ತಿಹಾಕಿ ಎನ್ನುವ ಕ್ರಾಂತಿಕಾರಕ ಬದಲಾವಣೆ ಹೆಚ್ಚು ಮಹತ್ವದ್ದು.ಅಷ್ಟೇ ತಾತ್ತ್ವಿಕ ಪ್ರಜ್ಞೆ ಕಟ್ಟಿಕೊಡುತ್ತದೆ. ಧನ್ಯವಾದಗಳು