ಮಂಗಳವಾರ, ಡಿಸೆಂಬರ್ 14, 2010

ತಾಯಿ - ಕೂಸು

೧
ಹಸುಗೂಸು ಮಲಗಿಹುದು
ಹುಸಿನಗೆಯು ತೊಲಗಿಹುದು.
ಕನಸಿನಾಚೆಗಿರುವ ನಿದ್ದೆಯಲ್ಲಿ
ತನ್ನನ್ನೂ ಮರೆತಿಹುದೊ
ತನ್ನೊಳಗೆ ಬೆರೆತಿಹುದೊ
ಹಸಿವು ಭಯ ಮುದ್ದಾಟವಿಲ್ಲ ಅಲ್ಲಿ.

೨
ಉಸಿರ ದಾರದ ತುದಿಗೆ
ಹಾರುಹಕ್ಕಿಯ ಬದಿಗೆ
ಜೀವಪಟ ಹೆಡೆಯಾಟವಾಡುತಿಹುದು
ಮೇಲ್ಮುಗಿಲ ಗಾಳಿಯಲಿ
ತನ್ನೊಂದು ಲೀಲೆಯಲಿ
ತೀರಲದು ತಾನೆ ಇಳೆಗಿಳಿಯಲಹುದು.

೩
ಕೆಲಸದಲಿ ಬಿಡುವಿಲ್ಲ
ಕೂಸಿನಲಿ ಮನವೆಲ್ಲ
ತಾಯಿ ಯೋಗಿನಿ ಮೈಲಿ ದುಡಿಯುತಿಹಳು
ತನ್ನೆದೆಯ ತೊಟ್ಟಿಲಲಿ
ಕಂದನನು ಇಟ್ಟಲ್ಲಿ
ಕಂಠದಲಿ ಜೋಗುಳವ ನುಡಿಸುತಿಹಳು

೪
ಇತ್ತ ಮರುಳಾಟದಲೊ
ಜೀವದೊಳತೋಟಿಯಲೊ
ಮುಖರಂಗಮಂಡಲದಿ ಭಾವ ಭಾವ!
ಹುಬ್ಬು ಗಂಟಿಕ್ಕುವುದು ;
ಎದೆ ಏಕೊ ಬಿಕ್ಕುವುದು ;
ತುಟಿಯು ನಗುವುದು ; ಅದನು ಕಂಡನಾವ?

                                                        - ದ.ರಾ. ಬೇಂದ್ರೆ
                                                            ' ನಾದಲೀಲೆ ' 

ಕಾಮೆಂಟ್‌ಗಳಿಲ್ಲ: