ಗುರುವಾರ, ಜನವರಿ 13, 2011

ಮೋಹನ ಮುರಲಿ

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                             - ಎಂ. ಗೋಪಾಲಕೃಷ್ಣ ಅಡಿಗ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಅದ್ಭುತ ಕಾವ್ಯ...

"ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ."

ಓಹ್.. ಎಂತಹ ಕಲ್ಪನೆ !

ಭಾವಗೀತೆಯಾಗಿ ಸಾಧಾರಣವಾಗಿ ಹಾಡುವ ಸಾಲುಗಳಲ್ಲದೆ, ಕವನದ ಇತರ ಅದ್ಭುತ ಸಾಲುಗಳನ್ನೂ ಒಂದೆಡೆ ಒದಗಿಸಿದ ತಮಗೆ ಅನಂತ ಧನ್ಯವಾದಗಳು.. ನಿರಂತರವಾಗಿ ಸಾಗಲಿ ತಮ್ಮ ಈ ಶ್ಲಾಘನೀಯ ಪರಿಶ್ರಮ...