ಮಂಗಳವಾರ, ಜನವರಿ 4, 2011

ನಾವು ಹುಡುಗಿಯರೇ ಹೀಗೆ...

-೧-
ಹೌದು ಕಣೆ ಉಷಾ
ನಾವು ಹುಡುಗಿಯರೇ ಹೀಗೆ...
ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ
'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೋ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ.
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ
ಮುಸು ಮುಸು ಅಳುತ್ತೇವೆ.
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.
ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವುದೇ ಇಲ್ಲ ಉಷಾ...

-೨-
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ
'ಅವನು' ಸಿಗುತ್ತಾನೆ.
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ
ಅಂತ ರೋಷ ತಾಳುತ್ತೇವೆ.
ಆದರೆ ಮೇಲೆ ನಗುನಗುತ್ತಾ 'ಅವನ'
ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.
ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?
ನಾವು ಹುಡುಗಿಯರೇ ಹೀಗೆ...

                                       - ಪ್ರತಿಭಾ ನಂದಕುಮಾರ್

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕೆಲವು ಹುಡುಗರು ಕೂಡ ಹೀಗೆ ಇರುತ್ತಾರೆ. ಹುಡುಗಿಯರು ಹಾಗಿರುವುದರಿಂದಲೇ ಹಲವು ಸಂಸಾರಗಳು ನಡೆ(ಕುಂಟು)ತ್ತಾ ಸಾಗಿವೆ, ಇಲ್ಲವಾಗಿದ್ದರೆ ವಿಚ್ಛೇದನಾ ಪರಿಣಯ(ಲೇ: ಕೆ ಸತ್ಯನಾರಾಯಣ) ಆಗುತಿತ್ತಾಂತ. ಬರೀ ರಮ್ಯವಲ್ಲದ ಕವನ ಓದಿಸಿದ್ದಕ್ಕೆ ಧನ್ಯವಾದಗಳು.
-
ರವಿ

ಜನ್ಮಿತ ಹೇಳಿದರು...

ಈ ಕವನ ಕೇವಲ ಹುಡುಗಿಯರಿಗ್ ಮಾತ್ರವಲ್ಲದೇ ಹುಡುಗರಿಗೂ ಅನ್ವಯ ಆಗುತ್ತೆ. ಕಲವು ಸಾರಿ ಮನಸ್ಸಿನ ಭಾವನೆಗಳನ್ನ, ತಳಮಳಗಳನ್ನ ಹೇಳ್ಕೋಳೋದಕ್ ಆಗ್ದೆ ತುಂಬಾನೆ ಒದ್ದಾಡ್ತೀವಿ.

ನನ್ಗೆ ಈ ಕವನದಲ್ಲಿ ತುಂಬಾ ಇಷ್ಟ ಆದ ಸಾಲು
"ಆದರೆ ಮೇಲೆ ನಗುನಗುತ್ತಾ 'ಅವನ' ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ. ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?" ಎಷ್ಟ್ ಚೆನಾಗಿದೆ, ಎಷ್ಟ್ ಅರ್ಥ ಕೊಡುತ್ತೆ

ಅನಾಮಧೇಯ ಹೇಳಿದರು...

ಮೌನ ಹೊಂದಿರುವ ಹುಡುಗರು ಅವರ ಬಾವನೆಗಳು ಹುಡುಗಿಯರಿಗಿಂತ ಅವರ ಭಾವನೆಗಳು ಶ್ರೀಮಂತವಾಗಿರಲಿವೆ ಆದರೆ ಸ್ಪಂದನೆ ನೀಡುವ ಜೀವವಿರಬೇಕು ಅಸ್ಟೆ

Unknown ಹೇಳಿದರು...

ಅದ್ಭುತ ರಿ