ಮಂಗಳವಾರ, ಡಿಸೆಂಬರ್ 14, 2010

ಕುರುಡು ಕಾಂಚಾಣ

ಕುರುಡು ಕಾಂಚಾಣ ಕುಣಿಯುತಲಿತ್ತು I
ಕಾಲಿಗೆ ಬಿದ್ದವರ ತುಳಿಯುತಲಿತ್ತೋ II
                            ಕುರುಡು ಕಾಂಚಾಣ II ಪಲ್ಲ II

ಬಾಣಂತಿಯೆಲುಬ ಸಾ -
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೊ ;

ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ ;

ಬಡವರ ಒಡಲಿನ
ಬಡಬಾsನಲದಲ್ಲಿ  
ಸುಡು ಸುಡು ಪಂಜು ಕೈಯೊಳಗಿತ್ತೊ;

ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ -
ದುಂಬಿದಂತುಧೊ ಉಧೊ ಎನ್ನುತಲಿತ್ತೊ ;

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ ;

ಗುಡಿಯೊಳಗೆ ಗಣಣ, ಮಾ -
ಹಡಿಯೊಳಗೆ ತನನ, ಆಂ -
ಗಡಿಯೊಳಗ ಝಣಣಣ ನುಡಿಗೊಡುತಿತ್ತೋ ;


ಹ್ಯಾಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

                                      - ದ.ರಾ. ಬೇಂದ್ರೆ
                                          ' ನಾದಲೀಲೆ '

5 ಕಾಮೆಂಟ್‌ಗಳು:

Ananda_KMR ಹೇಳಿದರು...

nimage ee padyada artha gotthideya...?

Ananda_KMR ಹೇಳಿದರು...

mukhyavaagi nanage goth aagde iddaddu

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ ;

artha gothilla...

ಕನಸು.. ಹೇಳಿದರು...

'ನಾದಲೀಲೆ' ಕವನ ಸಂಕಲನದಲ್ಲಿ ಪ್ರತಿ ಕವನದ ಭಾವ ಸಂದರ್ಭವನ್ನು ಕುರಿತಾದ ಟಿಪ್ಪಣಿ ಇದೆ. 'ಕುರುಡು ಕಾಂಚಾಣ'ದ ಭಾವ ಸಂದರ್ಭ ಹೀಗಿದೆ, ನೋಡಿ. ಕವಿತೆಯ ಸಾರಾಂಶ ಅರ್ಥವಾಗುತ್ತದೆ.

" ಮಹಾಲಕ್ಷ್ಮಿಯ ಉಪಾಸಕರು ಎನಿಸಿಕೊಳ್ಳುವ ಗೊಂದಲಿಗರು ಬಡವರಿಂದಲೂ ಒಂದು ಕಾಸನ್ನು ಕೊಸರಿಕೊಳ್ಳಲು ಹೆಣಗುತ್ತಾರೆ; ಕುಣಿಯುತ್ತಾರೆ. ಬಾಣಂತಿಯರ ಸಾವು, ಚಿಕ್ಕ ಮಕ್ಕಳ ಬಲಿ, ಬಡವರ ಹೊಟ್ಟೆಯುರಿ, ಕಣ್ಣೀರು, ದುಡಿಮೆಗಾರರ ಬಾಯಿಗೆ ಬೀಳುವ ಮಣ್ಣು - ಇವೆಲ್ಲವೂ ಹಣದ ಹಂಚಿಕೆ ಜಗತ್ತಿನಲ್ಲಿ ಸರಿಯಾಗಿಲ್ಲ ಎಂದು ಕೂಗುತ್ತಿವೆ. ಜಗತ್ತಿನಲ್ಲಿ ಹಣ ಕಡಿಮೆಯಾಗಿಲ್ಲ. ಗುಡಿ, ಮಹಡಿ, ಅಂಗಡಿಗಳಲ್ಲಿ ಅದರ ಧ್ವನಿ ಕೇಳಿಬರುತ್ತಿದೆ. ಕಾಂಚಾಣಕ್ಕೆ ಕಣ್ಣಿಲ್ಲ ಇದೇ ನಿಜ. ಅಂದರೆ ಕಾಂಚಾಣವುಳ್ಳವರಿಗೆ ಕಣ್ಣು ಬರಬೇಕಾಗಿದೆ. ಈ ಹೊಸ ದೃಷ್ಟಿ ಉದಯವಾಗುವವರೆಗೆ ಕಾಂಚಾಣದ ಕಾಲಿಗೆ ಬೀಳುವವರ ಸಂಖ್ಯೆಯೂ ಕಡಿಮೆಯಾಗುವುದಿಲ್ಲ. ಅದು ತನ್ನ ಕುರುಡುತನದಲ್ಲಿ ತುಳಿಯುವ ಕೃತ್ಯವನ್ನು ನಿಲ್ಲಿಸುವುದಿಲ್ಲ. "

ಕನಸು.. ಹೇಳಿದರು...

ಈ ಕವನದಲ್ಲಿ ಕಾಂಚಾಣ(ಹಣ)ವನ್ನು ಕುರುಡೆಂದು ಪರಿಗಣಿಸಲಾಗಿದೆ. ಅದು ಕಾಲಿಗೆ ಸಿಕ್ಕವರನ್ನು ತುಳಿಯುತ್ತ ತನ್ನ ದೌರ್ಜನ್ಯವನ್ನು ಮೆರೆಯುತ್ತಿದೆ. ಅದರ ಭೀಕರ ರೂಪ ಹೇಗಿದೆ ಎಂಬುದನ್ನು ಇಲ್ಲಿ ಕವಿ ವರ್ಣಿಸಿದ್ದಾರೆ : ಕಾಲಿನ ಕಿರುಗೆಜ್ಜೆ, ಕೊರಳೊಳಗಿನ ಜೋಮಾಲೆ, ಕೈಯೊಳಗಿನ ಪಂಜು, ಹಣೆಯಲ್ಲಿನ ಭಂಡಾರ, ಮೈದುಂಬಿ ಉಧೊ ಎನ್ನುವ ರೀತಿ...ನೀವು ಕೇಳಿದ ಸಾಲುಗಳು ಅದರ ರೂಪವನ್ನು ವರ್ಣಿಸುತ್ತಾ ಹೇಳಿದಂತಹವು:

ಕೂಲಿ (ಕೂಲಿ-ಕುಂಬಳಿ ಜೋಡಿಪದ) ಜನರ ಮೈ ಚರ್ಮದ ಧೂಳು ಆ ಕುರುಡು ಕಾಂಚಾಣದ ಹಣೆಯಲ್ಲಿ ಭಂಡಾರ(ವಿಭೂತಿ, ಗಂಧ ಮೊದಲಾದ ದೇವರ ಪ್ರಸಾದ ಎಂದರ್ಥ) ವಾಗಿತ್ತು.ಆದರೆ ಕವಿತೆಯ ಕೊನೆಗೆ, ಪು.ತಿ.ನ.ರವರು ಹೇಳುವಂತೆ " ಹಣದ ದುರ್ವೈಭವವನ್ನು ಜಾಲಾಡಿ ಕೊನೆಯಲ್ಲಿ ಎತ್ತಿಹಾಕಿ ಧ್ವಂಸ ಮಾಡಲಾಗಿದೆ"ಅರ್ಥವಾಗಿರಬಹುದೆನ್ನಿಸುತ್ತದೆ.ಪ್ರತಿಕ್ರಿಯಿಸಿ,

ಕನಸು.

bharathi b.s ಹೇಳಿದರು...

ಇವತ್ತಿಗೂ ಪ್ರಸ್ತುತವಾದ ಪದ್ಯ...ಕಾಂಚನದ ರಾಕ್ಷಸಿ ಕೃತ್ಯದ ಹಾರಾಟ ಕೊನೆಗೊಳ್ಳುವ ಕಾಲ ಬೇಗ ಬರಲಿ. Thanks for sharing