ಬನ್ನಿ ಬನ್ನಿ ಕನಸುಗಳೇ!
ಬನ್ನಿ ಬನ್ನಿ ಕನಸುಗಳೇ
ಮರಳಿ ಮನೆಗೆ ಬನ್ನಿ II ಪ II
೧
ಹಸುಳೆತನದ ನಸುನಗೆಯಲಿ
ಹುಸಿಗತೆಗಳ ಹೊಸ ಜಗದಲಿ
ಬಣ್ಣಗೊಂಡು ಬಗೆಬಗೆಯಲಿ
ಕಣ್ಣು ಚಿವುಟಿ ಕಳೆದುಹೋದ
ಕನಸುಗಳೇ ಬನ್ನಿ.
೨
ಹೇ! ಮಾತಾಡುವ ಗಿಣಿಗಳಿರಾ
ಪೂತಿಹ ಪೆಣ್ಮಣಿಗಳಿರಾ
ಜ್ಯೋತಿಯುಳ್ಳ ಕಣಿಗಳಿರಾ
ಸಾಸದರಸುಕುವರರೇ
ಲೇಸಗಳಿಸಿದಮರರೇ
ಮುಚ್ಚಿಕೊಂಡ ಕನಸುಗಳೇ
ಬಿಚ್ಚಿ ಬಿಡಿಸಿ ಬನ್ನಿ.
೩
ಹುಡುಗರ ಹುಡುಗಾಟದಲ್ಲಿ
ಬೆಡಗಿನ ಗೆಳೆಮಾಟದಲ್ಲಿ
ಬೆಳೆಸಿದ ಕೈತೋಟದಲಿ
ಕೆಲೆದ ತುಂಬಿ ಚಿಟ್ಟೆಯಂಥ
ಕನಸುಗಳೇ ಬನ್ನಿ.
೪
ಹೇ! ಮೀರಿದ ಬೆಳದಿಂಗಳವೇ
ತೀರದಾಟದಂಗಳವೇ
ಕೋರಿದಂಥ ಮಂಗಳವೇ
ತಿರುಳುಗೊಂಡ ಮನಗಳೇ
ಕುರುಡುಗಳೆದ ದಿನಗಳೇ
ಜಾರಿಹೋದ ಕನಸುಗಳೇ
ಹಾರಿ ತಿರುಗಿ ಬನ್ನಿ.
೫
ಹರೆಯದ ತೆರೆ ತೆರೆಗಳಲ್ಲಿ
ಅರೆತೆರೆದಿಹ ಮರೆಗಳಲ್ಲಿ
ಎದೆಯ ಮುದದ ತೊರೆಗಳಲ್ಲಿ
ಸುಧೆಯ ಕುಡಿದ ಹಕ್ಕಿ ಜಿಂಕೆ
ಕನಸುಗಳೇ ಬನ್ನಿ.
೬
ಹೇ! ಬಳ್ಳಿವಳ್ಳಿ ಇಹ ಬಲವೇ
ತಳ್ಳಂಕವ ತೊರೆದೊಲವೇ
ಮಿಳ್ಳನೊಲೆದ ಕಡು ಚಲವೆ
ಹಾರೈಸಿದ ಬಿಡುಗಡೆ
ಏರಾಟದ ನಿಲುಕಡೆ
ಮಿಂಚಿಹೋದ ಕನಸುಗಳೇ
ಹೊಂಚು ದಾಟಿ ಬನ್ನಿ.
-ದ.ರಾ.ಬೇಂದ್ರೆ
' ನಾದಲೀಲೆ '
2 ಕಾಮೆಂಟ್‌ಗಳು:
its very nice
ಗೀತವೆಂದರೆ ಬೇಂದ್ರೆ. ಕವಿತೆಯೆಂದರೆ ಕುವೆಂಪು.. ಒಲವ ಚೆಲುವ ನೋವ ನಲಿವ ಬದುಕ ಗಾರುಡಿಗರು ಈ ಕವಿಗಳು....
ಮತ್ತೆ ಇವರನ್ನೆಲ್ಲ ನೋಡುತ್ತಿದ್ದಂತೆ ಮನಸು ಮಳೆಯಲ್ಲಿ ನೆನೆದ ತಂಪು ತಂಪು ಅನುಭವ...
ಕಾಮೆಂಟ್ ಪೋಸ್ಟ್ ಮಾಡಿ