ಬುಧವಾರ, ಫೆಬ್ರವರಿ 1, 2012

ನಿಂಬೆ ಗಿಡ

ನಾ ಚಿಕ್ಕವನಾಗಿದ್ದ ಅಪ್ಪ ಹೇಳುತ್ತಿದ್ದರು;
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು;
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡ, ಮರಿ
ಆ ಪ್ರೇಮವೂ ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆಗಿಡ ತುಂಬಾ ಚೆಂದ, ನಿಂಬೆಯ ಹೂವು ತುಂಬಾ ಸಿಹಿ
ಆದರೆ ನಿಂಬೆಯ ಹಣ್ಣೊ, ಕಂದ, ತಿನ್ನಲು ಬಹಳ ಹುಳಿ, ಕಹಿ

ಯೌವನದಲ್ಲಿ ನಾನೂ ಒಂದು ಹುಡುಗಿಯ ಪ್ರೇಮಿಸಿದೆ
ಈ ಹುಡುಗಿಯು ನನಗೆ ಊಡಿಸುತ್ತಿದ್ದಳು ದಿನವೂ ಪ್ರೇಮ ಸುಧೆ
ಸೂರ್ಯನತ್ತಲೇ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ;
                                                    IIನಿಂಬೆಗಿಡ ತುಂಬಾ ಚೆಂದII

ನಿಂಬೆಯ ಗಿಡದ ರೆಂಬೆ ರೆಂಬೆಯಲೂ ನೂರು ನೂರು ಮುಳ್ಳು;
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು;
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿಯಿಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ, ಬುದ್ಧಿ ಬಂತೆ? ಎಂದು
                                                   IIನಿಂಬೆಗಿಡ ತುಂಬಾ ಚೆಂದII

                                                      - ಬಿ. ಆರ್. ಲಕ್ಷ್ಮಣರಾವ್
                                                        (ಸ್ಫೂರ್ತಿ: ' ಲೆಮನ್ ಟ್ರೀ' ಎಂಬ ಇಂಗ್ಲಿಷ್ ಹಾಡು)

ಮನಸೇ

ಮನಸೇ, ನನ್ನ ಮನಸೇ
ಏನಾಗಿದೆ ನಿನಗೆ?
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ?

ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ?
ಬೂಟಾಟಿಕೆ, ಆ ನಾಟಕ
ಅವಳ ವಿವಿಧ ಪಾತ್ರ

ಪದೇ ಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮಪತಾಕೆ

ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ?

                                   - ಬಿ. ಆರ್. ಲಕ್ಷ್ಮಣರಾವ್

ನೀನಿಲ್ಲದಿರುವಾಗ

ನೀನಿಲ್ಲದಿರುವಾಗ, ನಲ್ಲ
ಒಬ್ಬಂಟಿ ನಾನು ಮನೆಯಲ್ಲಿ
ಮೂಡುವುದು ಚಿತ್ರ ಮನದಲ್ಲಿ :

ಭೋರ್ಗರೆದು ಮೊರೆಯುವುದು ಕಡಲು
ನೊರೆಗರೆದು ಕುದಿವ ಅಲೆಗಳು
ಮೇರೆಯರಿಯದ ಪ್ರೀತಿ ನಿನ್ನಲ್ಲಿ ನನಗೆ
ಅದಕೆಂದೆ ಕಡಲೆನ್ನ ಮನ ತುಂಬಿದೆ

ಏರು ಪರ್ವತ ಸಾಲು ಸಾಲು
ಹಿಮ ಕವಿದ ನುಣುಪು ಶಿಖರಗಳು
ಎಷ್ಟು ಎತ್ತರ ನನ್ನ ಪ್ರೀತಿ ನಿನ್ನಲ್ಲಿ!
ಅದಕೆಂದೆ ಪರ್ವತದ ಚಿತ್ರ ಮನದಲ್ಲಿ

ನನ್ನ ಪ್ರೀತಿಗೆ ಅಲೆಯ ಆತಂಕ ನೀಡಿರುವ
ಸಾಗರವೇ, ನಿನಗೆ ವಂದನೆ!
ನನ್ನ ಪ್ರೀತಿಗೆ ನಿನ್ನ ಶಿಖರ ಸೌಮ್ಯತೆ ಕೊಟ್ಟ
ಪರ್ವತವೆ, ನಿನ್ನ ಮರೆವೆನೆ?

                                         - ಬಿ. ಆರ್. ಲಕ್ಷ್ಮಣರಾವ್

ಗುರುವಾರ, ಜನವರಿ 19, 2012

ಮತ್ತಷ್ಟು ಕವನಗಳೊಂದಿಗೆ..


ಕಾವ್ಯ ಪ್ರೇಮಿಗಳೇ,

     ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..

    'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..


    ಅಕ್ಕರೆಯಿಂದ,
    ಕನಸು..
ನಿನ್ನಿಂದ

ಜೀವ ಬಂದಂತೆ
ಸವಿಭಾವ ಬಂದಂತೆ
ಇನಿಯಾ, ನೀ ಬಂದೆ
ನೀ ಬಂದೆ ನನ್ನ ಬಾಳಿಗೆ

ನಿನ್ನ ನೋಟವೆ ಚುಂಬಕ
ನಿನ್ನ ನಗೆಯೋ ಮೋಹಕ
ನಾ ಸೋತೆ, ಶರಣಾದೆ
ನಿನ್ನ ಸ್ಪರ್ಶಕೆ
ಮಿಂಚು ಹರಿದಂತೆ
ನನ್ನ ಧಮನಿ ಧಮನಿಯಲಿ
ಘಲ್ಲೆಂದು ಈ ಮೊಗ್ಗರಳಿ
ಹೂವಾಯಿತು

ಬಂತು ಹೂವಿಗೆ ಪರಿಮಳ
ಬಣ್ಣದೋಕುಳಿ ದಳದಳ
ಈ ಅಂದ ಮಕರಂದ
ಎಲ್ಲಾ ನಿನ್ನಿಂದ
ಪ್ರೀತಿ ನೀನೆರೆದೆ
ನನ್ನ ಬಾಳ ಬೇರಿಗೆ
ಈ ಹೂವು ಕಾಯಾಗಿ
ಹಣ್ಣಾಯಿತು

                                   - ಬಿ. ಆರ್. ಲಕ್ಷ್ಮಣರಾವ್
ಪುಟ್ಟ ಕೊಳ

ನನ್ನವಳು, ಈ ನನ್ನಾಕೆ
ಹರಿಯುವ ನದಿಯಲ್ಲ,
ಸರಿವ ಸರಿತೆಯಲ್ಲ,
ಇವಳೊಂದು ಪುಟ್ಟಕೊಳ,
ನನ್ನ ಬಾಳಿನ ಜೀವ ಜಲ.

ಹರಿಯುವ ನದಿಯಲ್ಲ,
ಒಳಸುಳಿಗಳ ಭಯವಿಲ್ಲ,
ಕಾಣದ ಕಡಲಿನ ಕರೆಗೆ ಓಗೊಟ್ಟು
ತೊರೆದುಹೊಗುವಂಥ ತೊರೆಯಲ್ಲ,
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಹಗಲು ರವಿ, ಬೆಟ್ಟ, ಮುಗಿಲು,
ಚಿಕ್ಕೆ, ಚಂದಿರನ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು.
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಬಿರು ಬಿಸಿಲಿಗೆ ಈಜಾಡಲು,
ಹೂ ತೋಟಕೆ ನೀರೂಡಲು,
ಮಕ್ಕಳು ಮರಿ ಚಿಕ್ಕ ದೋಣಿಯಲಿ ಕೂತು
ನಕ್ಕು ನಲಿಯುತ ವಿಹಾರ ಮಾಡಲು
ಸದಾ ಸಮೃದ್ಧ ಜಲ,
ಇವಳೊಂದು ಪುಟ್ಟ ಕೊಳ.

ಕರುಳ ಬಳ್ಳಿ ಒಡಲಲ್ಲಿ,
ಬಡಿದ ಕಲ್ಲು ತಳದಲ್ಲಿ,
ನರುಗಂಪು ಸೂಸಿ ನಗುವ ತಾವರೆ
ನೀರ ಮೇಲ್ಪದರದಲ್ಲಿ.
ಗಹನ, ಕಾಣಲು ಸರಳ,
ಇವಳೊಂದು ಪುಟ್ಟ ಕೊಳ.

                                      - ಬಿ. ಆರ್. ಲಕ್ಷ್ಮಣರಾವ್
ಅಮ್ಮ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

                                        - ಬಿ. ಆರ್. ಲಕ್ಷ್ಮಣರಾವ್

ಸುಬ್ಬಾಭಟ್ಟರ ಮಗಳೇ

ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೆ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆ ಎಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು:
ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿಗೆ, ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಅವೂನು

ಪಾತರಗಿತ್ತಿಯ ಪಕ್ಕವನೇರಿ
ಹೂ-ಪಡಖಾನೆಗೆ ಹಾರಿ
ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ
ದಿನ ಹೊಸತನದಲಿ ಬೆಳಗಿ

                                              - ಬಿ. ಆರ್. ಲಕ್ಷ್ಮಣರಾವ್