ಗುರುವಾರ, ನವೆಂಬರ್ 4, 2010

ನಿನ್ನ ಮೈತ್ರಿ


ನೂರಾರು ಅನುಭವದ ಅನುಯಾಯಿ ಆಗಿ ಮನ
ಕಂಗೆಟ್ಟು ಚಡಪಡಿಸಿ ನೋಯುತಿರಲು,
ಬಂಧು ಗೆಳೆಯರ ಆಸೆ ಧ್ರುವದೂರವಾಗಿರಲು,
ಸಾವೊಂದೆ ಶರಣೆಂದು ಬೇಯುತಿರಲು,
ನಿನ್ನೊಲವು ರೇವಾಗಿ ಬಳಿಕಂಡು 'ಬಾ'  ಎಂದು
ಸೆಳೆದು ಬಾಚುತ ತನ್ನ ಎದೆಗಪ್ಪಿತು ;
ಕಣ್ಣರಳಿ ನೋಡಿದರೆ ಸ್ವರ್ಗಸುಂದರ ನಗರಿ,
ಸೊಬಗು ಬೆಡಗಿನ ಸಿರಿಗೆ ಮೈ ನವಿರಿತು!

ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೊ ಸಲ
ಎನಿಸುವುದು ; ನನಗಿಂತ ಇಲ್ಲ ಧನ್ಯ.
ನಾನಪಾತ್ರನೋ ಏನೊ ನಿನ್ನಮಲ ಪ್ರೇಮಕ್ಕೆ
ನನಗಂತು ದಕ್ಕಿಹುದು ಜೀವದಾನ!

ಒಮ್ಮೊಮ್ಮೆ ಅಗಲಿಕೆಯ ಆಶಂಕೆ ಹದ್ದಾಗಿ
ಎರಗಿ, ಸುಖವನೆ ಕದ್ದು ಹಾರುವಂತೆ
ತೋರುತಿದೆ, ತೊರೆಯದಿರು; ಹರಿದಿರುವ ಜೀವನಕೆ
ಅಣೆಕಟ್ಟ ಬಿಗಿಯದಿರು ನಾರುವಂತೆ!

ಕಣ್ಣ ಬೆದರಿಸುತಿಹದು ತಿಮಿರಭಾರ
ಗುರಿಯ ಮಂದಿರ ದೂರ ; ನಾನಧೀರ -
ಬಾಳ ದುರ್ಗಮ ಪಥದ ಪಾದಯಾತ್ರಿ,
ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ!

                                                       - ಕೆ.ಎಸ್. ನಿಸಾರ್ ಅಹಮದ್
                                                            ' ಮನಸು ಗಾಂಧಿ ಬಜಾರು '

ನೆನೆದೆ ನೆನೆಯುವೆ

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

ಮನದಲ್ಲಿ ಘನಿಸಿರುವ ಚಹರೆ ಇಬ್ಬನಿಯಾಗಿ
ನಿನ್ನ ಹೂಗೆನ್ನೆಗೆಳು ತೋಯುವಾಗ ;
ಒದ್ದೆಗಣ್ಣಿನ ಜೊತೆಗೆ ಗದ್ಗದಿತ ಕೊರಲೊಂದು
ನಿನ್ನ ನಿದ್ದೆಗೆ ಉರುಲು ಬೀಸುವಾಗ.

ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ
ನನ್ನ ದೈನ್ಯವನೊಂದು ಹೋಲಿದಾಗ ;
ಕಣ್ಣಂಚ ಹೆದೆಯಲ್ಲಿ ಬಿಗಿಗೊಂಡ ನೋವೊಂದು
ನೇರ ನಿನ್ನೆದೆಯತ್ತ ತೂರಿದಾಗ.

ನಿನ್ನ ಬಗೆ ಮಸಣದಲಿ ಮುರಿದೊಲವ ಹೆಣವೊಂದು
ವಿರಸತೆಯ ಚಿತೆಯಲ್ಲಿ ಬೇಯುವಾಗ ;
ಮಣ್ಣಾದ ನೆನಹೊಂದು ಹಣ್ಣಾದ ಮೈಯೆಳೆದು
ಚಳಿಯ ಕಾಯಿಸಲಲ್ಲಿ ಹಾಯುವಾಗ.

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

                                                - ಕೆ.ಎಸ್. ನಿಸಾರ್ ಅಹಮದ್
                                                ' ನಿತ್ಯೋತ್ಸವ '
ಬೇಸರಾಗಿದೆ ಮಾತು

ಬೇಸರಾಗಿದೆ ಮಾತು, ಭಾರವಾಗಿದೆ ಮೌನ ;
ನೋವು ಕರಗಿದೆ ಕಣ್ಣಲಿ ;
ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ ;
ಮಳೆಗೆ ಆಸರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ,
ಜೀವ ರೆಕ್ಕೆಯ ಬಿಚ್ಚಿತೊ ;
ಯಾವ ಗವಿಗತ್ತಲಿನ ಮೌನಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ. 

                                                              - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '
ನೆನಪಾಗಿ ಬಾರದಿರು

ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ -
ಎಂದೊ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ -
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.

ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ ;
ಸಿಂಗರಿಸದಿರು ನನ್ನ ಚಿತೆಯ, ನಗೆಯನು ಹೊಯ್ದು
ನಾನೆ ಬೆಳೆಸಿದ ಹೂವ ಗೊಂಚಲಲ್ಲಿ.

ಯೌವನದ  ಹೊಸ್ತಿಲಲಿ ಕಟ್ಟಿದ್ದ ತೋರಣದ
ಕನಸ ತರಗೆಲೆಗಳನು ಬರಿದು ಮಾಡು ;
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕದಿರಲೆದೆ ತುಂಬ ಜೇನುಗೂಡು.

ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು :
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ ;
ಹೃದಯದೊಳನೋವುಗಳ ಬಿರಿಸುವರೆಮರೆಮಾತು -
ಮಾಯ್ದ ಗಾಯವ ಮತ್ತೆ ಗೀಚಬೇಡ!

ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೊ ಮುಗಿದಿರುವ ದೀಪಗಳನು ;
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು.

                                                                 - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '
ನಿನ್ನ ಹಿರಿಮೆ

ನಿನ್ನ ಅನುರಾಗವೇ ಬೆಳಗಿರುವುದೆನ್ನೆದೆಯ
ಇರುಳು ಬಾನಿನ ತುಂಬು ಬಿಂಬವಾಗಿ ;

ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೂ
ಸವಿನುಡಿಯ ನರುಗಂಪು ತೇಲಿರುವುದು ;

ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸುನಗೆಯ  ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ  ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು ;

ಯಾವ ಋಣವೊ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

                                                              - ಕೆ.ಎಸ್. ನಿಸಾರ್ ಅಹಮದ್
                                                                   ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php
ಮತ್ತದೇ ಬೇಸರ...


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ -
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ.

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು ,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ.

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ :
ಬರುವೆಯೋ, ಬಾರೆಯೋ ನೀನೆನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ, ಬಿಗಿಮೌನವ ಹೊಡೆದೋಡಿಸು ಬಾ!
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!

ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ.
ನೋಡಗೊ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ :
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.

                                                     - ಕೆ.ಎಸ್.ನಿಸಾರ್ ಅಹಮದ್
                                                       ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php
ಎಲ್ಲ ಮರೆತಿರುವಾಗ

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ :
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣಿನ ನೆಟ್ಟನೋಟದೆರಚಣವನ್ನೇ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ :
ಬಿರಿದ ತುಟಿಗಳ ತುಂಬುನಗೆಯ ಕಾರಣವನ್ನೆ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ.
                                           ಎಲ್ಲ ಮರೆತಿರುವಾಗ...

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ ;
ಭವ್ಯ ಭವಿತವ್ಯಕೆ ಮೊಗ ಮಾಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು ಓ! ಚೆನ್ನ ನೆನಪೇ.
                                          ಎಲ್ಲ ಮರೆತಿರುವಾಗ...

                                                                - ಕೆ.ಎಸ್. ನಿಸಾರ್ ಅಹಮದ್
                                                                 ' ನಿತ್ಯೋತ್ಸವ '
ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Legends-RatnamalaPrakash.php

ಬುಧವಾರ, ನವೆಂಬರ್ 3, 2010

ಎಂಥಾ ಹದವಿತ್ತೇ !


ಎಂಥಾ ಹದವಿತ್ತೇ! ಹರಯಕೆ
ಏನೋ ಮುದವಿತ್ತೇ
ಅಟ್ಟೀ ಹಿಡಿದು
ಮುಟ್ಟೀ ತಡೆದು
ಗುಟ್ಟೂ ಸವಿಯಿತ್ತೇ  - ಗೆಳತಿ

ಅಮ್ಮನು ಬಡಿಸಿದ ಊಟದ ಸವಿಯು
ಘಮ್ಮನೆ ಕಾಡಿತ್ತೇ
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ
ಹೂವನು ಚೆಲ್ಲಿತ್ತೇ 
ಅಣ್ಣನ ಕೀಟಲೆ ತಮ್ಮನ ಕಾಟಕೆ
ಬಣ್ಣದ ಬೆಳಕಿತ್ತೇ!

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ
ಸುಳ್ಳಿನ ಸೊಬಗಿತ್ತೇ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು
ಬೆಲ್ಲವ ಮೀರಿತ್ತೇ
ಸುಳ್ಳೇ ನಿರಿಗೆಯ
ಚಿಮ್ಮುವ ನಡಿಗೆಗೆ
ಬಳ್ಳಿಯ ಬೆಡಗಿತ್ತೇ

ಎಂಥಾ ಹದವಿತ್ತೇ ಗೆಳತಿ
ಎಂಥಾ ಮುದವಿತ್ತೇ!
ಕಾಣದ ಕೈಯಿ ಎಲ್ಲಾ ಕದ್ದು
ಉಳಿಯಿತು ನೆನಪಷ್ಟೇ!

                                                     - ಡಾll ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ