ಸೋಮವಾರ, ನವೆಂಬರ್ 8, 2010

ಏಕೆ ಹೀಗೆ


ಏಕೆ ಹೀಗೆ
ನಮ್ಮ ನಡುವೆ
ಮಾತು ಬೆಳೆದಿದೆ?
ಕುರುಡು ಹಮ್ಮು
 ಬೇಟೆಯಾಡಿ
ಪ್ರೀತಿ ನರಳಿದೆ?

ಭೂಮಿ ಬಾಯ
ತೆರೆಯುತಿದೆ
ಬಾನು ಬೆಂಕಿ
ಸುರಿಯುತಿದೆ
ಧಾರೆ ಒಣಗಿ
ಚೀರುತಿದೆ
ಚಿಲುಮೆ ಎದೆಯಲಿ

ಮುಗಿಲ ಬರುವ
ಕಾಯುತಿದೆ
ಮಳೆಯ ಕನಸ
ನೇಯುತಿದೆ
ನಿನ್ನ ಬಯಸಿ
ಬೇಯುತಿದೆ
ನನ್ನ ಹೃದಯವು

                                               - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ


ಶನಿವಾರ, ನವೆಂಬರ್ 6, 2010

ನಿಸಾರರ ಕವನಗಳು........

ನನ್ನ ಅತ್ಯಂತ ಇಷ್ಟದ ಕವಿ ನಿಸಾರ್.

ಅವರ ಕವನಗಳು ಕಂಠಪಾಠವಾಗುವಷ್ಟರ ಮಟ್ಟಿಗೆ ನನ್ನನ್ನು ಕಾಡಿವೆ! ಹತಾಶೆಯ ಮಡಿಲಿನಲ್ಲೇ ಮರುಹುಟ್ಟು ಅರಸುವ ಅವರ ಕಾವ್ಯ ಸದಾ ಜೀವನ್ಮುಖಿ. ಆಡುಮಾತಿನಲ್ಲಿ ಬಳಕೆಯಾಗುವ ವಸ್ತು-ವಿಷಯಗಳೂ ಕಾವ್ಯದಲ್ಲಿ ಹೋಲಿಕೆಗಳಾಗಿ ಪ್ರಬಲ ಪಾತ್ರ ವಹಿಸಬಲ್ಲವು ಎಂಬುದಕ್ಕೆ ನಿಸಾರರು ಬಳಸುವ ಉಪಮೆ, ರೂಪಕಗಳೇ ಸಾಕ್ಷಿ. ಅವು ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳವಾಗಿ, ಮುಗ್ಧವಾಗಿರುವಂತೆಯೇ, ಅವರ ತೀವ್ರ ಭಾವನೆಗಳ ಆಳಕ್ಕೂ ಕೊಂಡೊಯ್ಯುವಷ್ಟು ಪ್ರಬುದ್ಧವಾಗಿವೆ. 

ಅವರ ಕಾವ್ಯಧಾರೆಯ ಕೆಲವು ಹನಿಗಳು ಇಲ್ಲಿವೆ.. ಓದಿ ಆನಂದಿಸಿ.

ಅಕ್ಕರೆಯಿಂದ,
ಕನಸು..
ನಾದವಿರದ ಬದುಕು

ನಾದವಿರದ ಬದುಕೇ, ಉನ್ಮಾದ ಕೋರಬೇಡ ;
ಈ ನೆಲದ ಜಲವ ಸವಿದು, ರವಿ ಕರುಣೆ ಮರೆಯಬೇಡ.

ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ;
ಸುಡುಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು.

ಕಳೆ ಎಷ್ಟೇ ಇದ್ದರೇನು? ಕನಸಿರದ ಬಾಳು, ಬಾಳೆ?
ಮಳೆಬಿಲ್ಲು ಸಿಂಗರಿಸದ ಕರಿಮುಗಿಲಿನೊಂದು ಮಾಲೆ!

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು ;
ಚೆಲುವೆದುರಿನಲ್ಲಿ ಸತತ ಹೊಸತಾಗಬೇಕು ಕಣ್ಣು.

ಚಣಚಣವು ಜೀವ ಮಾಗಿ, ಮರುಹುಟ್ಟು ಪಡೆಯುತಿರಲಿ ;
ಹೊಸ ನಲವ ನೆಲೆಗೆ ತಾನು ನಿಲದಂತೆ ನಡೆಯುತಿರಲಿ.

                                             -ಕೆ.ಎಸ್. ನಿಸಾರ್ ಅಹಮದ್
                                             ' ನಿತ್ಯೋತ್ಸವ '

ನೀನು ಜೊತೆಯೊಳಿರುವ ವೇಳೆ


ನೀನು ಜೊತೆಯೊಳಿರುವ ವೇಳೆ
ಬಿಗಿದು ನಿಲುವುದೆನ್ನ ಮನಸು.
ಯಾಕೊ ನಿನ್ನ ನಲಿವಿನಲ್ಲಿ
ಪಾಲುಗೊಳ್ಳದೆನ್ನ ಮನಸು.

ಅಗಲಿದೊಡನೆ ಅಂಗಲಾಚಿ
ಕೂಗಿ ಕರೆವುದೆನ್ನ ಮನಸು.
ನಿನ್ನ ದನಿಯ ಜೇನ ಹನಿಗೆ
ಚಡಪಡಿಸುವುದೆನ್ನ ಮನಸು.

ನೀನು ಪರರ ಒಡವೆಯೆಂದು
ಎಚ್ಚರಿಸುವುದೆನ್ನ ಮನಸು.
ಏನೊ ಪಾಪವೆಸಗಿದಂತೆ
ಪರಿತಪಿಸುವುದೆನ್ನ ಮನಸು.

ಇಷ್ಟು ದೂರ ಬಂದ ಬಳಿಕ
ತಿರುಗಲೊಪ್ಪದೆನ್ನ ಮನಸು.
ನಿನ್ನ ಸಂಗ ತೊರೆಯೆನೆಂಬ
ಪಣವ ತೊಡುತಲಿಹುದು ಮನಸು.

ಪಾಪ ಪುಣ್ಯ, ಒಳಿತು ಕೆಡುಕು -
ಗಣಿಸಲಾರದೆನ್ನ ಮನಸು.
ನಿನ್ನ ಪ್ರೇಮ ಕಲ್ಲೋಲದಿ
ಮುಳುಗಲೆಳಸುತಿಹುದು ಮನಸು.

                                - ಕೆ.ಎಸ್. ನಿಸಾರ್ ಅಹಮದ್.
                                ' ಬಹಿರಂತರ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kavanotsava.php

ಎಂಥ ಮಾಟ


ನೋಡು ನೀನೆಂಥ ಮಾಟ ಮಾಡಿರುವೆ
ಕಣ್ಣಿನ ಮರೆಗೆ ಇದ್ದೂ ಕಾಡಿರುವೆ.

ಹೂಡಿ ನೀ ಬಂದು ಯಾವುದೊ ನೆವವ
ಅಂದು ಕಣ್ ಧಾರೆ ಸುರಿಸಿದನುಭವವ,
ಮತ್ತೆ ನಾ ಸವಿವ ಸಂಚು ಹೂಡಿರುವೆ
ಅತ್ತು ಕಾತರಿಸುವ ಆಟ ನೋಡಿರುವೆ.
                                         ನೋಡು ನೀನೆಂಥ ಮಾಟ ಮಾಡಿರುವೆ....
  
ನಿನ್ನ ಹಿಂದೊಮ್ಮೆ ಒಲಿಯಿತೀ ಹೃದಯ
ಸಂದಿದೆ ನಾವು ಅಗಲಿ ಬಲು ಸಮಯ 
ಆದರೂ ಇರಿಯುತಿರುವೆ ನೆನಪಾಗಿ
ಜನ್ಮ ಜನ್ಮಾಂತರದ ವೈರಿ ನೀನಾಗಿ
                                   ನೋಡು ನೀನೆಂಥ ಮಾಟ ಮಾಡಿರುವೆ....

ಚಿತ್ತ ಸಿಂಗಾರಗೊಳಿಸಿ ಒಳ ಕರೆದೆ
ಸಾಟಿಯೇ ಇರದ ಪ್ರೀತಿ ನಾನೆರಿದೆ
ಅಂದು ನಾನೊಲಿದ ಪರಿಗೆ ಈ ಫಲವೆ?
ನೋವಿನಿಂದೆದೆಯ ಕೊರೆವ ಹುಲು ಛಲವೆ?
                            ನೋಡು ನೀನೆಂಥ ಮಾಟ ಮಾಡಿರುವೆ....

                                          - ಕೆ.ಎಸ್. ನಿಸಾರ್ ಅಹಮದ್
                                          ' ಬಹಿರಂತರ '
ಆ ರೂಪ


ಮತ್ತೆ ಆ ರೂಪ ಎದೆಗೆ ಹಾಯುತಿದೆ
ಚಿತ್ತ ಸಂತಾಪದಲ್ಲಿ ಬೇಯುತಿದೆ.
ಎಂದೊ ಹುಗಿದಂಥ ನೆನಹ ಕೆದಕುತಿದೆ
ಮೌನದುತ್ತಾಪದಲ್ಲಿ ಹೊಗೆಯುತಿದೆ.

ಇದ್ದಕಿದ್ದಂತೆ ಹೃದಯ ಹೌಹಾರಿ
ಸದ್ದೆ ಇರದಂತೆ ರೋದಿಸಿದೆ ಚೀರಿ.
ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ;
ಜೀವ ಏನನ್ನೊ ಬೇಡಿ ದುಡುಕುತಿದೆ.
                                  ಮತ್ತೆ ಆ ರೂಪ....

ಅಂದಿನಾಮೋದವನ್ನೆ ಕನವರಿಸಿ
ಬಾರದ ಕಾಲಕಾಗಿ ಚಡಪಡಿಸಿ
ಒಲವಿನ ಕತೆಯ ಮರಳಿ ನೆನೆಯುತಿದೆ
ತೀರದ ಬಯಕೆ ಕಣ್ಣ ಹನಿಸುತಿದೆ.
                                 ಮತ್ತೆ ಆ ರೂಪ....

ಭಾವದಾವೇಗ ಕೊರಳ ಬಿಗಿಸುತಿರೆ
ಜೀವ ಜೀವಾಳವನ್ನೆ ಕಲಕುತಿರೆ
ಫಲಿಸದ ಬಯಕೆಗಾಗಿ ಯಾಚಿಸಿದೆ
ದೀನತಾಭಂಗಿ ಬದುಕ ನಾಚಿಸಿದೆ.
                              ಮತ್ತೆ ಆ ರೂಪ....

                                       - ಕೆ.ಎಸ್. ನಿಸಾರ್ ಅಹಮದ್
                                       ' ಬಹಿರಂತರ '

ನಾ ನಿನ್ನ ಕಂಡಾಗ

ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ;
ಎಷ್ಟೊಂದು ಗೆಲವಿತ್ತು, ಅಷ್ಟೊಂದು ನಗುವಿತ್ತು.

ಹಗಲೆಲ್ಲ ನಿನ್ನ ಧ್ಯಾನ, ಇರುಳೆಲ್ಲ ನಿನ್ನ ಸ್ವಪ್ನ -
ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ.

ನೀ ಸುಳಿದರೆನ್ನ ಬಳಿಗೆ, ನೆರೆ ಬಂದ ಹಾಗೆ ಹೊಳೆಗೆ -
ಹೊಸ ಕಸುವಿನಿಂದ ನಲ್ಲೆ, ನಲವುಕ್ಕಿ ಹಾಡಬಲ್ಲೆ.

ಹಾಲ್ಗೆನ್ನೆ ಸುಳಿಗಳಲ್ಲಿ ನಸುಲಜ್ಜೆಯೆಂಬ ತೇರು ;
ಕಣ್ಣಂತು ಸಾಣೆ ಹಿಡಿದ ಸೆಳೆಮಿಂಚಿನೆರಡು ಚೂರು.

ನನ್ನೆದೆಯ ತೋಟದಲ್ಲಿ ಆಡಾಡು ಓ! ನವಿಲೇ -
ಇಹುದಲ್ಲಿ ಹಚ್ಚ ಹಸಿರು, ಇಳಿದಿಹುದು ಕಾರ್ಮುಗಿಲೇ.

ಹತ್ತಾರು ಚಿಂತೆಯಿರಲಿ, ಬಾಳೆಲ್ಲ ಗೋಳೆ ಇರಲಿ -
ನೀ ನಕ್ಕರೆಲ್ಲ ಮರೆವೆ ಸುಖಸ್ವಪ್ನದಲ್ಲಿ ತೇಲಿ.

ನೆನೆದಾಗ ನಿನ್ನ ರೂಪ, ಎದೆಗತ್ತಲಲ್ಲಿ ದೀಪ -
ಮನಬಿಚ್ಚಿ ಒಮ್ಮೆ ನಗಲು, ನನಗಾವ ಚಿಂತೆ ದಿಗಿಲು?

ಆ ಮೊದಲ ನೋಟದಂತೆ ಮಿಕ್ಕಿರಲಿ ನಿನ್ನ ಸೊಬಗು ;
ಅನುಗಾಲ ನನ್ನ ಮನಕೆ ನೀಡಿರಲಿ ತುಂಬು ಬೆರಗು.

                                                                 -ಕೆ.ಎಸ್. ನಿಸಾರ್ ಅಹಮದ್
                                                                  ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
 http://www.kannadaaudio.com/Songs/Bhaavageethe/home/Nityotsava.php

ಗುರುವಾರ, ನವೆಂಬರ್ 4, 2010

ನೆನಪು

ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ
ಗುಜರಾಯಿಸುತ ಪ್ರತಿಸಲವು, ಉತ್ತರಕೆ ತತ್ತರಿಸಿ
ಮುಖಭಂಗವಾಗಿರುವ, ಹಣೆಬರಹ ಚಿತ್ತಾದ
ನಿರ್ಭಾಗ್ಯ ; ನಿನ್ನಾಸೆಗೆಳ್ಳುನೀರನು ಬಿಟ್ಟು  
ವರ್ಷಗಳು ಕಳೆದಿವೆ, ಚಿಹ್ನೆಗಳು ಉಳಿದಿವೆ.

                     ನನ್ನೆದೆಯ ಹಸುರಲ್ಲಿ
ನಿನ್ನ ನೆನಪಿನ ಕಲ್ಲು ಬಿದ್ದೊಡನೆ ಸದ್ದಿರದೆ
ಹೂತು ಹೋಗುವುದರೊಳಗೆ ಕೆಸರಿನಲ್ಲಿ.

ನಮ್ಮ ಒಲವಿನ ಭೂತ ಕಂಕಾಲ ಹಿಡಿಯಾಗಿ
ಮನದ ಮೂಲೆಯೊಳೆಲ್ಲೊ ಹುಡಿಯಾಗಿದೆ ;
ಅದ ತಿವಿದು ಕೆಣಕುವುದು ನಿನ್ನ ನೆನಹ ಸಲಾಕಿ
ಜೀವವಿದ್ದರೆ ತಾನೆ ಭಾವ ಹೊರಹೊಮ್ಮೀತು?
ಹಳೆಯ ಗಾಯಗಳೆಲ್ಲ ಕಾಲವೈದ್ಯನ ಕುಶಲ
ಕರ್ಮದಿಂದೊಂದೆ ಮಾಯ್ದು, ಗರಿಗಳು ಬಿದ್ದ
ತೆಂಗಿನಂತೆದೆಯುದ್ದ ಗುರುತುಗಳು ಒತ್ತಿಹವು,
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು.

ನೋವುಗಳು, ಕೊರಗುಗಳು ಕದ್ದು ನನ್ನೆದೆ ಹೊಕ್ಕು
ತುಳಿದು ತೊತ್ತಳ ನಡೆದುದಕ್ಕೆ ರುಜುವಾತುಗಳು :
ಮುರಿದು ಜೋತಿರುವೆಳೆಯ ಕೊಂಬೆ ಒಡೆಯದ ಆಸೆ ;
ಬೇರುಗಳು ಬೇರಾಗಿ ಬುಡ ಮೇಲು ಉರುಳಿರುವ
ಹೊಚ್ಚ ಹೊಸ ಉತ್ಸಾಹ ; ಕಾಯಿತನದಲೆ ಉದುರಿ
ಮಣ್ಣುಗೂಡಿದ ಕನಸಿನೆಷ್ಟೊ ಜೊಂಪೆ ; ಸುಗಂಧ
ಬಿಡುವ ಮೊದಲೇ ಎವೆಯನೀಗಲೋ, ಆಗಲೋ
ಮುಚ್ಚುವೆನುವಾರೋಗ್ಯ -
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು,
ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು.

                                                    - ಕೆ.ಎಸ್. ನಿಸಾರ್ ಅಹಮದ್
                                                       ' ಸುಮುಹೂರ್ತ '