ಕುಶಲ ಪ್ರಶ್ನೆ
ಈ ವಾರದುದ್ದಕೂ ಇವನು ದಿನವೂ ಸಿಕ್ಕಿ
ಬಿಸಿಲಿಲ್ಲದಿದ್ದರೂ ನನಗೆ ಚತ್ರಿಯ ಹಿಡಿದು
ಜೇಬಿನಲ್ಲಿರದ ಕನ್ನಡಕವನ್ನು ಹುಡುಕುತ್ತ,
'ಕ್ಷೇಮವೇ?' ಎಂದು ಮೃದುವಾಗಿ ಕೇಳಿದ್ದಾನೆ.
ತಾನು ಯಾರೆಂದೆಲ್ಲ ತಿಳಿಸದಿದ್ದರೆ ಕೂಡ
(ನನ್ನ ತಪ್ಪೂ ಉಂಟು: ನಾನೂ ಕೇಳಲಿಲ್ಲ!)
ಅನೇಕ ವಿಷಯಗಳನ್ನು ನನಗೆ ಹೇಳಿದ್ದಾನೆ.
ನಾನು ಕಂಬದ ಹಾಗೆ ನಿಂತು ಕೇಳಿದ್ದೇನೆ.
ಇವನು ಹೇಳಿದ್ದಲ್ಲ ನನ್ನ ಸದ್ಯದ ಪ್ರಶ್ನೆ;
ಇವನು ಕೇಳಿದ್ದು, ಕುಶಲಪ್ರಶ್ನೆ, ನನ್ನನ್ನು
'ಕ್ಷೇಮವೇ?' ಎಂದು ಕೇಳಿದ್ದೆ ತಪ್ಪೆಂದೆಲ್ಲ,
ವಾರಕ್ಕೆ ಎರಡು ಸಲ ಬಹಳ ಸಾಕಾಗಿತ್ತು!
(ಕಂಡಾಗಲೆಲ್ಲ ಹೀಗೇಕೆ ಕೇಳುತ್ತಾನೆ?);
ಬಂತು ಸಂಶಯ ನನಗೆ ವಾರಾಂತ್ಯದಲ್ಲಿ
ಮನೆಯವರಿಗೀ ವಿಷಯ ಅರ್ಥವಾಗುವುದಿಲ್ಲ:
ಗೆಳೆಯರನ್ನೀಗ ಮಾತಾಡಿಸುವ ಹಾಗಿಲ್ಲ!
ಈ ಸಲದ ಆಷಾಢವೆಲ್ಲ ಹೀಗೆಯೆ ನನಗೆ:
ಮುಟ್ಟಿದರೆ ಮುಳ್ಳು. ಪರಿಹಾರಕ್ಕೆ ಇವನನ್ನೇ
ಕಾಣಬೇಕೆಂದು ಎದ್ದವನೆ ಬಂದಿದ್ದೇನೆ
ಹೂಮಾಲೆ ಹಿಡಿದು. ಕಣ್ಣಲ್ಲೆ ಅಳೆದಿದ್ದೇನೆ
ಒಂದಂಗಡಿಯ ಬಿಡದೆ. ಇವನಿಲ್ಲ, ಬಂದಿಲ್ಲ.
ಯಾರಿಲ್ಲವೆಂದು ಯಾರನ್ನು ಕೇಳುವುದಿಲ್ಲಿ?
ನನ್ನ ಕ್ಷೇಮದ ಕಡೆಗೆ ನನ್ನ ಗಮನವ ಸೆಳೆದ
ಕರುಣಾಳುವಿಲ್ಲದೆಯು ಪೂರ್ತಿಯಾಗಿದೆ ಪೇಟೆ.
- ಕೆ. ಎಸ್. ನರಸಿಂಹಸ್ವಾಮಿ
'ತೆರೆದ ಬಾಗಿಲು'