ಸೋಮವಾರ, ಡಿಸೆಂಬರ್ 30, 2013

ಕಾಡುಕುದುರೆ

ಕಾಡುಕುದರಿ ಓಡಿ ಬಂದಿತ್ತII

ಊರಿನಾಚೆ ಊರ ದಾರಿ
ಸುರುವಾಗೊ ಜಾಗದಲ್ಲಿI
ಮೂಡಬೆಟ್ಟ ಸೂರ್ಯಹುಟ್ಟಿ
ಹಸರಿನ ಗುಟ್ಟ ಒಡೆವಲ್ಲಿI
ಮುಗಿವೇ ಇಲ್ಲದI
ಮುಗಿಲಿನಿಂದI
ಜಾರಿಬಿದ್ದ ಉಲ್ಕೀ ಹಾಂಗI
ಕಾಡಿನಿಂದ ಚಂಗನೆ ನೆಗೆದಿತ್ತII

ಮೈಯಬೆಂಕಿ ಮಿರಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತI
ಹೊತ್ತಿ ಉರಿಯೋ ಕೇಶರಾಶಿ
ಕತ್ತಿನಾಗ ಕುಣೀತಿತ್ತI
ಧೂಮಕೇತುI
ಹಿಂಬಾಲಿತ್ತI
ಹೌಹಾರಿತ್ತ ಹರಿದಾಡಿತ್ತI
ಹೈಹೈ ಅಂತ ಹಾರಿ ಬಂದಿತ್ತII

ಕಣ್ಣಿನಾಗ ಸಣ್ಣ ಖದ್ಗ
ಆಸುಪಾಸು ಝಳಪಿಸಿತ್ತI
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತI
ಬಿಗಿದ ಕಾಡI
ಬಿಲ್ಲಿನಿಂದI
ಬಿಟ್ಟ ಬಾಣಧಾಂಗ ಚಿಮ್ಮಿI
ಹದ್ದ ಮೀರಿ ಹಾರಿ ಬಂದಿತ್ತII

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿI
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿI
ಹತ್ತಿದವರI
ಎತ್ತಿಕೊಂಡುI
ಏಳಕೊಳ್ಳ ತಿಳ್ಳೀ ಆಡಿI
ಕಳ್ಳೆಮಳ್ಳೆ ಆಡಿಸಿ ಕೆಡವಿತ್ತII

                                       - ಡಾ. ಚಂದ್ರಶೇಖರ ಕಂಬಾರ 

ಕಾಮೆಂಟ್‌ಗಳಿಲ್ಲ: