ನನ್ನ ಪಾತ್ರ
ನೋಡು ನೋಡುತ್ತಿದ್ದಂತೆ
ನನ್ನ ನಾಟಕದ ಆ ಪಾತ್ರ
ರಂಗದಿಂದಿಳಿದು ನೇರ ಬಳಿಗೇ ಬಂದ.
ಪಕ್ಕದ ಕುರ್ಚಿಯಲ್ಲಿ ಕೂತ.
ನಾನು ನಾಟಕ ನೋಡುತ್ತಿದ್ದರೆ
ಇವನು ನನ್ನ ಕಡೆ
ತನ್ನ ಕಣ್ಣು ಶಲಾಖೆಯೆಂಬಂತೆ
ಕಣ್ಣಿಂದ ನನ್ನೆದೆಯಲ್ಲಿ ತೂತು ಕೊರೆಯುತ್ತ ಕೂತ.
ತಗಲದ ಹಾಗೆ ಕಾಲು ಸರಿಸಿದರೆ ನಾನು
ಮುದ್ದಾಂ ಕಾಲು ತಗುಲಿಸಿ ಕೂತ.
ಭುಜ ಮುರಿಯುವಂತೆ ಕೈ ಹೇರಿದ.
ಎಲ್ಲರೂ ಸುಮ್ಮನಿದ್ದರೆ ಈತ ಖೊಕ್ಕೆಂದು ನಕ್ಕ.
ಅನಗತ್ಯ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿದ.
ಈಗ ಎಲ್ಲರ ಕಣ್ಣು ಇವನ ಮೇಲೆ.
ಇವನ ಕಣ್ಣು ನನ್ನ ಮೇಲೆ.
ಇದ್ಯಾಕೋ ಸರಿಹೋಗಲಿಲ್ಲಂತ
ನಾಟಕ ಬಿಟ್ಟು ಮನೆಗೆ ಹೊರಟೆ.
ಬೆನ್ನು ಹತ್ತಿ ಬಂದ.
ಬಾಗಿಲು ತೆರೆದರೆ
ನನಗಿಂತ ಮೊದಲೇ ಒಳಹೊಕ್ಕ.
ಥರಾವರಿ ದೇಶಾವರಿ ನಗೆ ನಗುತ್ತ
ಕನ್ನಡಿಯಾಗಿ ಎದುರಿಗೇ ನಿಂತ!
ಎಷ್ಟೊಂದು ಸೌಜನ್ಯ ಕಲಿಸಿ ಕಳಿಸಿದ
ನನ್ನ ಪಾತ್ರಗಳು
ಹಿಂಗ್ಯಾಕೆ ಮಾಡುತ್ತವೆ?
- ಡಾ. ಚಂದ್ರಶೇಖರ ಕಂಬಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ