ಪ್ರತೀಕ್ಷೆ
ಈ ದಿನಾಂತ ಸಮಯದಲಿ
ಉಪವನದೇಕಾಂತದಲಿ
ಗೋಧೂಳಿ ಹೊನ್ನಿನಲಿ-
ಬರದೆ ಹೋದೆ ನೀನು;
ಮರೆತುಹೋದೆ ನೀನು.
ನಾ ಬಿಸುಸುಯ್ಯುವ ಹಂಬಲವೊ,
ಶುಭ ಸಮ್ಮಿಲನದ ಕಾತರವೊ!
ಬಾ ಇನಿಯ, ಕರೆವೆ ನೊಂದು-
ಬರದೆ ಹೋದೆ ನೀನು;
ಮರೆತುಹೋದೆ ನೀನು.
ಈ ದಿನಾಂತ...
ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ-
ಬರದೆ ಹೋದೆ ನೀನು;
ಮರೆತುಹೋದೆ ನೀನು.
ಈ ದಿನಾಂತ...
ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು.
ಶಶಿ ಮೆರೆಸಿರೆ ತೋರು ಬೆರಳೂ-
ಬರದೆ ಹೋದೆ ನೀನು;
ಮರೆತುಹೋದೆ ನೀನು.
ಈ ದಿನಾಂತ...
ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ, ಕಳೆಯೆ ಶಿಕ್ಷೆ-
ಬರದೆ ಹೋದೆ ನೀನು;
ಮರೆತುಹೋದೆ ನೀನು.
ಈ ದಿನಾಂತ...
- ಕೆ. ಎಸ್. ನಿಸಾರ್ ಅಹಮದ್
' ಬಹಿರಂತರ ' (೧೯೯೦)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ