ಸೋಮವಾರ, ಜನವರಿ 10, 2011

ಒಂದು ಮಳೆಯ ಸಂಜೆ

ಮೋಡ ಕೂಡಿದ ಬಾನು; ವಿಪರೀತ ಧಗೆ ಕೂಡ.
ಒಮ್ಮೆಗೇ ಬೀಸುತ್ತಿದೆ ಮೋಡಗಾಳಿ
ಬಸ್ಸು ಹಿಡಿಯಲು ನಾನು ಸ್ಟಾಪಿನಲ್ಲಿದ್ದೇನೆ
ಪಕ್ಕದಲ್ಲೇ ಒಂದು ದೀಪ ಕಂಭ

ಎಲ್ಲಿದ್ದವೋ ಏನೊ ಒಮ್ಮೆಗೇ ಮುಕುರಿದವು
ದೀಪಕ್ಕೆ ನೂರಾರು ದೀಪದ ಹುಳು
ಮತ್ತೆ ಮರುಕ್ಷಣದಲ್ಲೆ ರೆಕ್ಕೆ ಕಳಚುದುರುತಿವೆ 
ರಸ್ತೆಯಗಲಕ್ಕೂನು ಮುಲು ಮುಲು ಮುಲು

ಮೊದಲೆ ಸಂಜೆ ಹೊತ್ತು, ಜತೆಗೆ ಮಳೆ ಬರುವಂಥ
ಸೂಚನೆಗೆ ಧಾವಂತ ವಾಹಕರಿಗೆ
ಭರ್ರನೋಡಿಸುತ್ತಾರೆ ರಿಕ್ಷ ಸ್ಕೂಟರು ಕಾರು
ಹಾರಿಬೀಳುವ ಹುಳದ ರಾಶಿ ಮೇಲೆ

ಕರುಳು ಹಿಂಡಿದ ಹಾಗೆ ನುಲಿಯುತಿದೆ. ಈ ಪಾಟಿ
ರಣಹಿಂಸೆ ಅನಿವಾರ್ಯವೆನ್ನುವಂತೆ
ಮಂದಿ ನೋಡಿಯು ನೋಡದಂತೆ ನಿಂತಿದ್ದಾರೆ
ತಾವೂನು ಕಂಭಗಳೆ ಎನ್ನುವಂತೆ.

ಹುಟ್ಟು ಸಾವಿನ ಲೀಲೆ ಕಣ್ಮುಂದೆ ನಡೆಯುತ್ತಿದೆ
ಕೊಲೆ, ಸಾವು ಎರಡು ಸಹ ಒಂದೆ ಎನಿಸಿ
ನಿರ್ಭಾವ ಯಂತ್ರಗಳ ಒಳಗೆ ಜನಸಮ್ಮರ್ದ
ತಮ್ಮೆಲ್ಲ ಭಾರ ಗಾಲಿಗೆ ದಾಟಿಸಿ.

ನಮ್ಮ ಬಸ್ಸೂ ಬಂತು. ಕೂತೆ ಸೀಟಿನ ಮೇಲೆ.
ಏನೊ ಚಿಟಿ ಚಿಟಿ ಸದ್ದು ಕಿವಿಯ ಒಳಗೆ
ಗಂಟಲನ್ನೊತ್ತುತ್ತಿದೆ ಜೀವ ಬಾಯಿಗೆ ಬಂದು
ವಿಲಿಗುಟ್ಟುವುದು ಪಾದ ಬಸ್ಸಿನೊಳಗೆ.

                                                - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ನದೀತೀರದಲ್ಲಿ '

ಕಾಮೆಂಟ್‌ಗಳಿಲ್ಲ: