ಸೋಮವಾರ, ಜನವರಿ 10, 2011

ನೋಡಬಾರದು ಚೀಲದೊಳಗನು

ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಿನಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವರೇ?

ಒಂದು ಕನ್ನಡಿ ಹಣಿಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಿಸೆ ಬೀಜಗಳೂ!
ವ್ಯಾನಿಟಿ ಬ್ಯಾಗಿನಲ್ಲಿ ಬಟಾಣಿಯೇ ಇರಬೇಕೆಂದು
ಉಂಟೇ ಯಾರ ರೂಲು?
ಇದ್ದೀತು ಶುಂಠಿ ಪೆಪ್ಪರಮೆಂಟೂ, ಕಂಫಿಟ್ಟೂ.

ಒಣಗಿ ರೂಹುಗಳಾದ ಎಲೆ-ಹೂಗಳಿರಬಹುದು
ಇರಬಹುದು ಯಾರದೋ ಮನೆ ದಾರಿ ನಕ್ಷೆ
ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
ತೇದಷ್ಟೂ ಸವೆಯದಾ ನೆನಪು
ಟಿಕ್ಕಿ ಎಲೆ ಪರಿಮಳ

ಮರಿ ಇಡುವ ನವಿಲುಗರಿ
ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
ಇರಬಹುದು ಎಲ್ಲಿನದೋ ಮರಳು-ಮಣ್ಣು.

ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರ ಬಂಧದಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮತ್ತು ಇರಬಹುದು
ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲದ ಫೋಟೋ ಕೂಡ ಇರಬಹುದು!

ಬಾಲ್ಯ ಯೌವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗಾರ್ಹಸ್ಥ್ಯ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದಕೊಂದಕೆ ಅರ್ಥಾಂತರವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು?
ಹಾಗೆಯೇ ಈ ಚೀಲದೊಳಗಿನ ಲೋಕಗಳು!

ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು.

ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.

                                          - ವೈದೇಹಿ

5 ಕಾಮೆಂಟ್‌ಗಳು:

ಪ್ರೇಮತಾಣ ಹೇಳಿದರು...

ವೈದೇಹಿಯವರ ಕವನಗಳನ್ನು ನಾನು ಓದಿಯೇ ಇರಲಿಲ್ಲ. "ಸಂಪದ"ದ ಓದುಗ ಮಿತ್ರರೊಬ್ಬರು ನೀಡಿದ ಲಿಂಕ್‌ನಿಂದ ಇಲ್ಲಿಗೆ ಬಂದು ಈ ಕವನ ಓದಿದೆ. ತುಂಬ ಇಷ್ಟವಾಯಿತು.

ಕನ್ನಡದ ಮುಖ್ಯ ಕವಿ ಕವಯಿತ್ರಿಯರ ರಚನೆಗಳನ್ನು ಒಂದೆಡೆ ಕಲೆಹಾಕಿ ನೀಡುತ್ತಿರುವ ನಿಮಗೆ ನನ್ನ ಮನಪೂರ್ವಕ ಕೃಹಜ್ಞತೆಗಳು. ನೀವು ತುಂಬ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ. ವಂದನೆಗಳೊಡನೆ -ಪ್ರೇಮಶೇಖರ

ಕನಸು.. ಹೇಳಿದರು...

ಧನ್ಯವಾದಗಳು.. ನಿಮ್ಮಂಥವರ ಪ್ರತಿಕ್ರಿಯೆಗಳೇ ನನ್ನನ್ನು ಮತ್ತಷ್ಟು ಕವನಗಳೆಡೆಗೆ ಹೊರಳುವಂತೆ ಮಾಡುತ್ತವೆ.. ನಿಮ್ಮ ಸಾಹಿತ್ಯ ಪ್ರೀತಿ ಹೀಗೆ ಮುಂದುವರೆಯಲಿ..

ಕನಸು..

Srinidhi Rao ಹೇಳಿದರು...

ನಮಸ್ತೆ !
ವೈದೇಹಿ ಯವರ ಅಡುಗೆ ಮನೆ ಹುಡುಗಿ ಕವನ ಇದ್ದಾರೆ ಹಂಚಿ ಕೊಳ್ಳುವಿರಾ


ಪ್ರೀತಿಯಿಂದ,
ಶ್ರೀನಿಧಿ

Unknown ಹೇಳಿದರು...

ನಮಸ್ಕಾರ ವೈದೇಹಿ ಮೇಡಮ್ ಅವರ ಕವಿತೆಗಳು ಓದುಗರಿಗೆ ಬಹಳ ಹತ್ತಿರವಾಗುತ್ತವೆ.

Unknown ಹೇಳಿದರು...

ದಯಮಾಡಿ ಅಡುಗೆ ಮನೆ ಹುಡುಗಿ ಪದ್ಯ ವನ್ನು
ಹಂಚಿಕೊಳ್ಳುವಿರಾ?
ಧನ್ಯವಾದಗಳು .