ಕಣ್ಣಿನಲ್ಲಿ ಬಿದ್ದ ಜಗವೆ
ಅರ್ಧ ಬರೆದ ಪತ್ರದಂತೆ ಎಲ್ಲಿ ಹೊರಟೆ ಹಾರಿ
ಹೊಸ ಗಾಳಿಯ ಕೈಯಲ್ಲಿ ಹಸನಾಗುತ ಪೋರಿ
ತೇರಿನಲ್ಲಿ ದೇವರಿಲ್ಲ ಕೇರಿಯಲ್ಲಿ ಜನರು
ಕಾಗದದ ದೋಣಿಯಲ್ಲಿ ಮುದ್ದು ಮಳೆಯ ಕೆಸರು
ಪೇಟೆಯಲ್ಲಿ ಅಂಗಡಿಗಳು ಕಣ್ತೆರೆಯುವ ಹೊತ್ತು
ನಿನ್ನ ಮೂಕ ಸಣ್ಣಲೋಕ ಅವರಿಗೇನು ಗೊತ್ತು
ಗುರ್ತಿನವರು ಕೇಳಿಯಾರು ಎಲ್ಲಿ ಹೊರಟೆ ಜೋರು
ನಿಟ್ಟುಸಿರಲಿ ಉಕ್ಕುತಿರಲು ಒಲೆಯ ಮೇಲೆ ಮೀನು ಸಾರು
ಏನಾಯಿತು ಕ್ಷಣದಿ ಎಲ್ಲ ಸ್ತಬ್ಧವಾಯಿತೆ
ಕಣ್ಣಿನಲ್ಲಿ ಬಿದ್ದ ಜಗವೆ ಒದ್ದೆಯಾಯಿತೆ
ಏನೋ ಮರೆತೆ ಅನಿಸಿದರೆ ಬಂದು ಬಿಡೆ ಮನೆಗೆ
ಹಿತ್ತಲಲ್ಲಿ ಒಣಗುತಿದೆ ನಿನ್ನ ಒಂಟಿ ಕಿರಿಗೆ
ಇಂಥದೊಂದು ಸೆಳೆತದಲ್ಲಿ ಉಕ್ಕಿ ಬಂದರೇನೇ
ಚೊಕ್ಕವಾಗಿ ಹೊಳೆದೀತು ನಿನ್ನ ಬಿಸಿಲ ಕೋಣೆ
- ಜಯಂತ ಕಾಯ್ಕಿಣಿ
' ಒಂದು ಜಿಲೇಬಿ '
1 ಕಾಮೆಂಟ್:
ಕಳೆದು ಹೋದ ಸಂಗಾತಿಯನ್ನು ನೆನಪಿಸೋ ಕಾವ್ಯ..
ಕಾಮೆಂಟ್ ಪೋಸ್ಟ್ ಮಾಡಿ