ಘಾಟ್ ಸೆಕ್ಶನ್
ರಪ್ ರಪ್ ಎಂದು ತಗಡಿನ ತಲೆಯ ಮೇಲೆ ಬಿರುಮಳೆ
ಅಪ್ಪಳಿಸಿದಷ್ಟೂ ಉತ್ತೇಜಿತಗೊಂಡು ಬಸ್ಸು
ಮೋಡಗಳ ಕಡಲಲ್ಲಿ ಇಳಿಯುತ್ತಿದೆ.
ಸುತ್ತಲೂ ಮುತ್ತಲೂ ನೀರದ ನೀರಾದ ಕತ್ತಲು
ಕರಗುತಿವೆ ನವಿಲುಗಿರಿ ನೀರಿನಾಚೆ
ನಿಟ್ಟುಸಿರು ನಸುನಿದ್ರೆ ಗುಟ್ಟು ಪೊಟ್ಟಣ ಚೀಲ
ಎಲ್ಲ ಈಚೆಗಿವೆ
ಭಗ್ನ ಎಚ್ಚರಗಳ ಭಂಗಿಯಲ್ಲಿ
ಹಗಲಲ್ಲೇ ಮಂಕುದೀಪ ಉರಿಸಿಕೊಂಡು
ಅರೆ ತುಂಬಿದ ಬೆಳಕಿನ ಕೊಡದಂತೆ
ತುಳುಕುತ್ತದೆ ಬಸ್ಸು
ಗಕ್ಕೆಂದು ತಿರುವಿನಲ್ಲಿ ಅವಾಕ್ಕಾಗಿ
ಚಾಲಕನೊಬ್ಬನಿಗೇ ಗೊತ್ತಿದೆ ಎಲ್ಲ ಆಚೆಯದು
ಅಂದುಕೊಂಡಿದ್ದೆವು ಈ ತನಕ
ಆದರೆ ಅವನೆದುರೂ ಈಗೊಂದು ಭಯದ ಬತ್ತಲೆಗಾಜು
ರಭಸದಿಂದ ಎರಗುವ ಅಪರಿಚಿತ ನೀರನ್ನು
ಬದಿಗೆ ತಳ್ಳುತ್ತಲೇ ಇದೆ
ನಿರಂತರ ಏಕಾಕಿ ಹೋರಾಟದಲ್ಲಿ
- ಜಯಂತ ಕಾಯ್ಕಿಣಿ
' ಒಂದು ಜಿಲೇಬಿ '
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ