ಶನಿವಾರ, ಫೆಬ್ರವರಿ 18, 2012

ನೆಲದ ಕರೆ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನ ದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ.

ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ.

ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲಗಗನದಲ್ಲಿ ತೇಲಿಹೋಗುತಿಹ
ನಿಮ್ಮನೆಳೆಯಬಹುದೆ?

ಬಾಯುಂಟು ನನಗೆ, ಕೂಗಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ,
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೆ
ಪರಮಪೂಜೆಯೆನ್ನಿ!

                                        - ಜಿ. ಎಸ್. ಶಿವರುದ್ರಪ್ಪ
                                         'ಸಾಮಗಾನ'

1 ಕಾಮೆಂಟ್‌:

Bharathi-nath ಹೇಳಿದರು...

ಆಕಾಶದಲ್ಲಿ ತೇಲಿ ಬರಿದೆ ಸಾಗುವ ಮೋಡಗಳಿಗೆ ಕವಿ ಕರೆ ನೀಡುತ್ತಾರೆ, ಹೋಗೋದು ಹೋಗುತೀರ,ನಾಲ್ಕು ಹನಿ ಚೆಲ್ಲಿ ಹೋಗಿ. ಬಾಯಾರಿಕೆ ,ಬಿಸಿಲಿನ ತಾಪ,ನೋವು, ಉರಿ,ಬೇಗೆ,ಎಲ್ಲ ಆಗುತ್ತಿದೆ. ಮಳೆ ಸುರಿ‌ಸಿ ತಂಪೆರೆಯಿರಿ.ನೊಂದ ಜೀವರಿಗೆ ತಂಪು ನೀಗುವುದೆ ಪರಮ ಪೂಜೆ. ಬನ್ನಿ, ಬನ್ನಿ, ಆ ರೀತಿ ಮಾಡಿ ಪುಣ್ಯ ಕಟ್ಟಿ ಕೊಳ್ಳಿ,ಎನ್ನುತ್ತಾರೆ ಕವಿ.