ಬುಧವಾರ, ಫೆಬ್ರವರಿ 15, 2012

ಬನ್ನಿ ನನ್ನ ಹೃದಯಕೆ 

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೇ
ಉಸಿರನಿಡುವೆ   
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೇ
ಉಸಿರನಿಡುವೆ 
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದುರಿದ
ಹೊಂಗನಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

                        - ಜಿ. ಎಸ್. ಶಿವರುದ್ರಪ್ಪ
                           'ಪ್ರೀತಿ ಇಲ್ಲದ ಮೇಲೆ'




4 ಕಾಮೆಂಟ್‌ಗಳು:

Ananda_KMR ಹೇಳಿದರು...

ಧನ್ಯವಾದಗಳು !!

ಕನಸು.. ಹೇಳಿದರು...

ನೋಡಿದಿರಾ, ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ.. ಆದರೆ ಆ ಧನ್ಯವಾದ ನಿಮಗೇ ಸಲ್ಲಬೇಕು.. ಈ ಕವನವನ್ನು ಹುಡುಕುವಂತೆ ಪ್ರೇರೇಪಿಸಿದ್ದು ನೀವೇ ತಾನೇ? :)

ಕನಸು..

Ananda_KMR ಹೇಳಿದರು...

ನೀವು ಸಾಹಿತ್ಯವನ್ನ ಹುಡುಕಿ ಮತ್ತು ಅದನ್ನ ನಿಮ್ಮ ಬ್ಲಾಗ್ನಲ್ಲಿ ಪೋಸ್ಟ್ ಮಾಡ್ತೀರಲ್ಲ ನಿಮ್ಮ patience ಗೆ ಒಂದು ಸಲಾಂ :)

Ananda_KMR ಹೇಳಿದರು...

ಹಾಗೆ ನೀವು ಓದಿದ ಆ ಪುಸ್ತಕದಲ್ಲಿ ಕವಿತೆಗಳ ರಚನೆಗೆ ಪ್ರೇರಣೆಯಾದ ವಸ್ತು ಅಥವಾ ಸನ್ನಿವೇಶಗಳ ಬಗ್ಗೆ ವಿವರಣೆ ಇದೆಯೇ ?