ಬುಧವಾರ, ಜೂನ್ 8, 2011

ಬಾ ಬೇಗನೆ!

ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ;
ಎಲ್ಲಿ ಹೋದೆಯೊ, ಇನಿಯ? ಬಾ ಬೇಗನೆ.
ಮಬ್ಬು ಕವಿದಿದೆ ಮನಕೆ; ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ: ಬಾ ಬೇಗನೆ!

ಮುಳುಗಿದುದು ರವಿ; ಓಕುಳಿಯ ಚೆಲ್ಲಿದುದು ಸಂಧ್ಯೆ;
ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ.
ಕತ್ತಲೆಯ ಕರಿನೆಳಲೊಡನೆ ಮೂಡಿದುವು ತಾರೆ;
ಹಬ್ಬಿಹುದು ಮರುಭೂಮಿಯಂತೆ ಶಾಂತಿ!

ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ
ಹಾದಿ ನೋಡುತಲಿಹೆನು, ಬಾ ಬೇಗನೆ.
ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು
ಮುದಗೊಳಿಸು, ಹೃದಯೇಶ, ಬಾ ಬೇಗನೆ.

                            - ಕುವೆಂಪು
                            ' ಪ್ರೇಮ ಕಾಶ್ಮೀರ '

ತೆರೆದಿದೆ ಮನೆ, ಓ, ಬಾ ಅತಿಥಿ !

ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ,
ಓ ನವಜೀವನ ಅತಿಥಿ!

ಆವ ರೂಪದಲಿ ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು  ಬಹೆಯ?
ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರು ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,
             ಬಾನಾಗಿ,
                             ಗಿರಿಯಾಗಿ,
                                     ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ  
ಬಾ, ಅತಿಥಿ!
ತೆರೆದಿದೆ ಮನೆ, ಓ  ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!

                                    - ಕುವೆಂಪು
                                        ' ಪ್ರೇಮ ಕಾಶ್ಮೀರ '

ಬುಧವಾರ, ಮೇ 11, 2011

ವೀಣಾಗಾನ

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
 ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

                    - ಕುವೆಂಪು
                     ' ಪ್ರೇಮ ಕಾಶ್ಮೀರ '
ನೀನೆನ್ನ ಬಳಿಯಿರಲು

ನೀನೆನ್ನ ಬಳಿಯಿರಲು ಜಗ ತುಂಬಿ ತುಳುಕುವುದು;
ನೀನು ಹೋದರೆ ದೂರ ಶೂನ್ಯವಾಗುವುದು.
ನೀನೆನ್ನ ಜೀವನದ ಸರ್ವಸ್ವವಾಗಿರುವೆ;
ಓ ನನ್ನ ಪ್ರಿಯ ಮೂರ್ತಿ, ಎದೆಗೆ ಬಾರೈ.

ಬಿಸಿಲುರಿವ ಮರುಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗಕೆಳಸುವುದು;
ಮಳೆಗರೆದು, ತಂಪಿತ್ತು, ಪರಿಹರಿಸಿ ಬೇಗೆಯನು,
ಪ್ರೇಮತೋಯದ ಮೂರ್ತಿ, ಎದೆಗೆ ಬಾರೈ.

ಅಗಲಿಕೆಯ ಸಹಿಸಲಾರೆನು ನಾನು; ನಿನ್ನನ್ನೆ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು.
ಓ ನನ್ನ ಆನಂದ ಸತ್ಯಸುಂದರ ಮೂರ್ತಿ,
ಶೂನ್ಯವನು ಪೂರ್ಣಗೈ! ಎದೆಗೆ ಬಾರೈ!

                                      - ಕುವೆಂಪು
                                    ' ಪ್ರೇಮ ಕಾಶ್ಮೀರ '
ಹೂವಿನ ಕೋರಿಕೆ

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರ ಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನೆ ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ, ಓ ನನ್ನ ಭ್ರಮರ ಬಂಧು!

                                    - ಕುವೆಂಪು
                                   ' ಪ್ರೇಮ ಕಾಶ್ಮೀರ '

ಶುಕ್ರವಾರ, ಏಪ್ರಿಲ್ 29, 2011

ಮಲಗೋ ಮಲಗೆನ್ನ ಮರಿಯೆ

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಭುವಿಗೆ?

ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದ್ದೆಯ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚೆಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗು ಮೂರು ನಾಮ !

                                                     - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಯಾಕೆ ಅವನ ಕಂಡೆನೋ !

ಯಾಕೆ ಅವನ ಕಂಡೆನೋ !
ಪ್ರೇಮದ ಸವಿಯುಂಡೆನೋ !
ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ,
ನಲ್ಲನನ್ನು ಬಿಟ್ಟು ಮನಸು ಹೃದಯ ನಿಲ್ಲವು

ನೂರು ಕಡೆಗೆ ಹಾಯುತ್ತಿದ್ದ
ಹೃದಯ ಇದೇ ಏನು?
ನೂರು ರುಚಿಯ ಬಯಸುತ್ತಿದ್ದ
ಮನಸು ಇದೇ ಏನು?
ಬಿಗಿದ ನಲ್ಲ ನನ್ನ ತನ್ನ ಸ್ಮರಣೆಯೊಂದಕೇ
ಸೆಳೆದನಲ್ಲ ನನ್ನ ಕಣ್ಣ ತನ್ನ ಚಂದಕೇ !

ಮುಗಿಲ ಹನಿಗೆ ಕಾಯುತಿರುವ
ಚಕ್ರವಾಕ ನಾನು,
ಚಂದ್ರಿಕೆಗೇ ಬೇಯುವಾ
ಚಕೋರಪಕ್ಷಿ ನಾನು,
ಯಾರು ಕಂಡರೇನು, ಏನು ಅಂದರೇನು?
ಲಜ್ಜೆ ತೊರೆದು ಹೆಜ್ಜೆಯಿಡುವ ಅವನ ದಾಸಿ ನಾನು

                                                         
                                                                - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  

ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಸ್ವಾಗತ ಸಂಕ್ರಾಂತಿಯೇ!

ಸ್ವಾಗತ ಸಂಕ್ರಾಂತಿಯೇ
ಕಾಲ ತರುವ ಕ್ರಾಂತಿಯೇ,
ಹೊಸ ಬಾಳಿಗೆ ಹಸೆ ಹಾಸುವ
ಮಿತ್ರಾರುಣ ಕಾಂತಿಯೇ

ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ,
ಬಳಲಿದ ಕಾಲಿಗೆ ಬಲವನ್ನು ಊಡುವಂಥ ವರವೆ,
ಕನಸಿನ ಹೆದೆ ಚಿಮ್ಮಿ ಬಂದ ಆಕಾಂಕ್ಷೆಯ ಶರವೆ,
ಬವಣೆಯ ಭಾರವ ನೀಗಿ, ಬಾ ಓ ಸಂಕ್ರಾಂತಿಯೇ!

ಕಾಣದೊಂದು ಪಥಕಳೆಯುವ ಅನಿರೀಕ್ಷಿತ ಪಯಣವೆ
ಹೊಸ ಕಾಣ್ಕೆಗೆ ಎವೆ ಬಿಚ್ಚುವ ಬೆಳಕಿನೊಂದು ನಯನವೆ
ಎಳ್ಳು ಬೆಲ್ಲ ಜಲ್ಲೆ ಕಬ್ಬು ನಾಂದಿಯಾದ ಅಯನವೆ
ಭಾವೀ ದಿನಗಳ ಭಾಗ್ಯದ ಕದತೆರೆಯುವ ಕಿರಣವೆ!

ಬರಿ ಗಾಳಿಯೇ? ಬರಿ ಜಲವೇ? ಬರಿ ಬೆಳಕೇ? ಅಲ್ಲ,
ಬದಲಾಗಲಿ ಮುಡಿಯ ತನಕ ಇಡೀ ದೇಶವೆಲ್ಲ,
ಸತ್ಯ ಸ್ವಾಭಿಮಾನಯುಕ್ತ, ಬೇಧಮುಕ್ತ ಮನವ
ನೀಡಲಿ ಈ ಸಂಕ್ರಾಂತಿ ನೀಡಲಿ ಹೊಸ ದಿನವ

                                                  - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ