ಶುಕ್ರವಾರ, ಏಪ್ರಿಲ್ 29, 2011

ಮಲಗೋ ಮಲಗೆನ್ನ ಮರಿಯೆ

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಭುವಿಗೆ?

ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದ್ದೆಯ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚೆಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗು ಮೂರು ನಾಮ !

                                                     - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಯಾಕೆ ಅವನ ಕಂಡೆನೋ !

ಯಾಕೆ ಅವನ ಕಂಡೆನೋ !
ಪ್ರೇಮದ ಸವಿಯುಂಡೆನೋ !
ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ,
ನಲ್ಲನನ್ನು ಬಿಟ್ಟು ಮನಸು ಹೃದಯ ನಿಲ್ಲವು

ನೂರು ಕಡೆಗೆ ಹಾಯುತ್ತಿದ್ದ
ಹೃದಯ ಇದೇ ಏನು?
ನೂರು ರುಚಿಯ ಬಯಸುತ್ತಿದ್ದ
ಮನಸು ಇದೇ ಏನು?
ಬಿಗಿದ ನಲ್ಲ ನನ್ನ ತನ್ನ ಸ್ಮರಣೆಯೊಂದಕೇ
ಸೆಳೆದನಲ್ಲ ನನ್ನ ಕಣ್ಣ ತನ್ನ ಚಂದಕೇ !

ಮುಗಿಲ ಹನಿಗೆ ಕಾಯುತಿರುವ
ಚಕ್ರವಾಕ ನಾನು,
ಚಂದ್ರಿಕೆಗೇ ಬೇಯುವಾ
ಚಕೋರಪಕ್ಷಿ ನಾನು,
ಯಾರು ಕಂಡರೇನು, ಏನು ಅಂದರೇನು?
ಲಜ್ಜೆ ತೊರೆದು ಹೆಜ್ಜೆಯಿಡುವ ಅವನ ದಾಸಿ ನಾನು

                                                         
                                                                - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  

ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಸ್ವಾಗತ ಸಂಕ್ರಾಂತಿಯೇ!

ಸ್ವಾಗತ ಸಂಕ್ರಾಂತಿಯೇ
ಕಾಲ ತರುವ ಕ್ರಾಂತಿಯೇ,
ಹೊಸ ಬಾಳಿಗೆ ಹಸೆ ಹಾಸುವ
ಮಿತ್ರಾರುಣ ಕಾಂತಿಯೇ

ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ,
ಬಳಲಿದ ಕಾಲಿಗೆ ಬಲವನ್ನು ಊಡುವಂಥ ವರವೆ,
ಕನಸಿನ ಹೆದೆ ಚಿಮ್ಮಿ ಬಂದ ಆಕಾಂಕ್ಷೆಯ ಶರವೆ,
ಬವಣೆಯ ಭಾರವ ನೀಗಿ, ಬಾ ಓ ಸಂಕ್ರಾಂತಿಯೇ!

ಕಾಣದೊಂದು ಪಥಕಳೆಯುವ ಅನಿರೀಕ್ಷಿತ ಪಯಣವೆ
ಹೊಸ ಕಾಣ್ಕೆಗೆ ಎವೆ ಬಿಚ್ಚುವ ಬೆಳಕಿನೊಂದು ನಯನವೆ
ಎಳ್ಳು ಬೆಲ್ಲ ಜಲ್ಲೆ ಕಬ್ಬು ನಾಂದಿಯಾದ ಅಯನವೆ
ಭಾವೀ ದಿನಗಳ ಭಾಗ್ಯದ ಕದತೆರೆಯುವ ಕಿರಣವೆ!

ಬರಿ ಗಾಳಿಯೇ? ಬರಿ ಜಲವೇ? ಬರಿ ಬೆಳಕೇ? ಅಲ್ಲ,
ಬದಲಾಗಲಿ ಮುಡಿಯ ತನಕ ಇಡೀ ದೇಶವೆಲ್ಲ,
ಸತ್ಯ ಸ್ವಾಭಿಮಾನಯುಕ್ತ, ಬೇಧಮುಕ್ತ ಮನವ
ನೀಡಲಿ ಈ ಸಂಕ್ರಾಂತಿ ನೀಡಲಿ ಹೊಸ ದಿನವ

                                                  - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಇಂದಿನ ಸಂಕ್ರಾಂತಿ

ಬಳಲಿದ ಬಾಳಿಗೆ ಭರವಸೆಯಾಗಲಿ
ಇಂದಿನ ಸಂಕ್ರಾಂತಿ
ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ
ಮೂಡಲಿ ಶುಭಶಾಂತಿ

ದಿಕ್ಕುಗಳೆಲ್ಲವು ಪ್ರಸನ್ನವಾಗಲಿ
ಬೀಸಲಿ ತಂಗಾಳಿ
ಬತ್ತಿದ ನದಿಗಳ ಪಾತ್ರವು ತುಂಬಲಿ
ಗಂಗೆಯೆ ಮೈತಾಳಿ
ತೂಗುತಿರಲಿ ಹೊಲಗದ್ದೆಗಳು
ತೆನೆಯ ಹಾರವಾಗಿ
ಹಣ್ಣು ತುಂಬಿ ಮರ ನಗುತಿರಲಿ
ಬಣ್ಣದ ತೇರಾಗಿ!

ಬಾ ಸಂಕ್ರಾಂತಿಯೇ ವರವಾಗಿ
ಜೀವಸ್ವರವಾಗಿ
ಸೋತ ದೇಹಗಳು ಚೇತನವ
ತುಂಬಲು ನೆರವಾಗಿ
ಬಡವರ ದೀನರ ಬಾಳಿನಲಿ
ತೃಪ್ತಿಯ ನಗೆಯಾಗಿ
ನನಸಾಗುವ ಹೊಸ ಕನಸುಗಳ
ಬಿತ್ತುವ ಕರವಾಗಿ

                                                       - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಗುರುವಾರ, ಜನವರಿ 13, 2011

ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ!
ಮಳೆ ಗಾಳಿಗೆ ನೆನೆನೆನೆದು
                  ಸೋರುತಿಹುದು ಮನೆಯ ಮಾಳಿಗಿ                ಪ

ಸೋರುತಿಹುದು ಮನೆಯ ಮಾಳಿಗಿ
ದಾರು ಗಾಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
                        ಮೇಲಕೇರಿ ಮೆಟ್ಟಲಾರದೇ                        

ಮುರಕ ತೊಲೆಯು ಹುಳಕ ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರಗಿಂಡಿ
                  ಮರೆತು ನಾನು ಮುಚ್ಚಲಾರದೇ                  

ಕರಿಕಿ ಕಸವು ಹುಲ್ಲ ಹತ್ತಿ
ದುರಿತ ಭವದ ಇರುವಿ ಮುತ್ತಿ
ಜಲದ ಭರದಿ ತಿಳಿಯ ಮಣ್ಣು
      ಒಳಗೆ ಹೊರಗೆ ಏಕವಾಗೀ    
             
ಕಾಂತೆ ಕೇಳ ಕರುಣದಿಂದ
ಬಂತು ಕಾಣೆ ಹುಬ್ಬೀ ಮಳೆಯು
ಈಗ ಶಿಶುವಿನಾಳ ಗ್ರಾಮಕ
                             ಮೇಘರಾಜ ಇಳಿದ ಮೇಲೆ                             

                                    - ಶಿಶುನಾಳ ಶರೀಫ ಸಾಹೇಬ
ಮೋಹನ ಮುರಲಿ

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                             - ಎಂ. ಗೋಪಾಲಕೃಷ್ಣ ಅಡಿಗ

ಸೋಮವಾರ, ಜನವರಿ 10, 2011

ನೋಡಬಾರದು ಚೀಲದೊಳಗನು

ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಿನಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವರೇ?

ಒಂದು ಕನ್ನಡಿ ಹಣಿಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಿಸೆ ಬೀಜಗಳೂ!
ವ್ಯಾನಿಟಿ ಬ್ಯಾಗಿನಲ್ಲಿ ಬಟಾಣಿಯೇ ಇರಬೇಕೆಂದು
ಉಂಟೇ ಯಾರ ರೂಲು?
ಇದ್ದೀತು ಶುಂಠಿ ಪೆಪ್ಪರಮೆಂಟೂ, ಕಂಫಿಟ್ಟೂ.

ಒಣಗಿ ರೂಹುಗಳಾದ ಎಲೆ-ಹೂಗಳಿರಬಹುದು
ಇರಬಹುದು ಯಾರದೋ ಮನೆ ದಾರಿ ನಕ್ಷೆ
ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
ತೇದಷ್ಟೂ ಸವೆಯದಾ ನೆನಪು
ಟಿಕ್ಕಿ ಎಲೆ ಪರಿಮಳ

ಮರಿ ಇಡುವ ನವಿಲುಗರಿ
ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
ಇರಬಹುದು ಎಲ್ಲಿನದೋ ಮರಳು-ಮಣ್ಣು.

ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರ ಬಂಧದಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮತ್ತು ಇರಬಹುದು
ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲದ ಫೋಟೋ ಕೂಡ ಇರಬಹುದು!

ಬಾಲ್ಯ ಯೌವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗಾರ್ಹಸ್ಥ್ಯ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದಕೊಂದಕೆ ಅರ್ಥಾಂತರವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು?
ಹಾಗೆಯೇ ಈ ಚೀಲದೊಳಗಿನ ಲೋಕಗಳು!

ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು.

ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.

                                          - ವೈದೇಹಿ
ಒಂದು ಮಳೆಯ ಸಂಜೆ

ಮೋಡ ಕೂಡಿದ ಬಾನು; ವಿಪರೀತ ಧಗೆ ಕೂಡ.
ಒಮ್ಮೆಗೇ ಬೀಸುತ್ತಿದೆ ಮೋಡಗಾಳಿ
ಬಸ್ಸು ಹಿಡಿಯಲು ನಾನು ಸ್ಟಾಪಿನಲ್ಲಿದ್ದೇನೆ
ಪಕ್ಕದಲ್ಲೇ ಒಂದು ದೀಪ ಕಂಭ

ಎಲ್ಲಿದ್ದವೋ ಏನೊ ಒಮ್ಮೆಗೇ ಮುಕುರಿದವು
ದೀಪಕ್ಕೆ ನೂರಾರು ದೀಪದ ಹುಳು
ಮತ್ತೆ ಮರುಕ್ಷಣದಲ್ಲೆ ರೆಕ್ಕೆ ಕಳಚುದುರುತಿವೆ 
ರಸ್ತೆಯಗಲಕ್ಕೂನು ಮುಲು ಮುಲು ಮುಲು

ಮೊದಲೆ ಸಂಜೆ ಹೊತ್ತು, ಜತೆಗೆ ಮಳೆ ಬರುವಂಥ
ಸೂಚನೆಗೆ ಧಾವಂತ ವಾಹಕರಿಗೆ
ಭರ್ರನೋಡಿಸುತ್ತಾರೆ ರಿಕ್ಷ ಸ್ಕೂಟರು ಕಾರು
ಹಾರಿಬೀಳುವ ಹುಳದ ರಾಶಿ ಮೇಲೆ

ಕರುಳು ಹಿಂಡಿದ ಹಾಗೆ ನುಲಿಯುತಿದೆ. ಈ ಪಾಟಿ
ರಣಹಿಂಸೆ ಅನಿವಾರ್ಯವೆನ್ನುವಂತೆ
ಮಂದಿ ನೋಡಿಯು ನೋಡದಂತೆ ನಿಂತಿದ್ದಾರೆ
ತಾವೂನು ಕಂಭಗಳೆ ಎನ್ನುವಂತೆ.

ಹುಟ್ಟು ಸಾವಿನ ಲೀಲೆ ಕಣ್ಮುಂದೆ ನಡೆಯುತ್ತಿದೆ
ಕೊಲೆ, ಸಾವು ಎರಡು ಸಹ ಒಂದೆ ಎನಿಸಿ
ನಿರ್ಭಾವ ಯಂತ್ರಗಳ ಒಳಗೆ ಜನಸಮ್ಮರ್ದ
ತಮ್ಮೆಲ್ಲ ಭಾರ ಗಾಲಿಗೆ ದಾಟಿಸಿ.

ನಮ್ಮ ಬಸ್ಸೂ ಬಂತು. ಕೂತೆ ಸೀಟಿನ ಮೇಲೆ.
ಏನೊ ಚಿಟಿ ಚಿಟಿ ಸದ್ದು ಕಿವಿಯ ಒಳಗೆ
ಗಂಟಲನ್ನೊತ್ತುತ್ತಿದೆ ಜೀವ ಬಾಯಿಗೆ ಬಂದು
ವಿಲಿಗುಟ್ಟುವುದು ಪಾದ ಬಸ್ಸಿನೊಳಗೆ.

                                                - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ನದೀತೀರದಲ್ಲಿ '