ಗುರುವಾರ, ಡಿಸೆಂಬರ್ 19, 2013

ಇದಾವ ರಾಗ?

ಇದಾವ ರಾಗ?
ಮತ್ತೆ.. ಇದಾವ ರಾಗ,
ಎದೆಯಾಳದಿಂದೆದ್ದು ನಭನೀಲಿಗೇರುತಿದೆ-

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೋರುತಿದೆ
ಬಗೆಯ ಬಾನ್ ಬಯಲಿನಲಿ ಮೋಡಗಳ ಕವಿಸುತಿದೆ.

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರೆಹವನೊರಸಿ ಬೇರೊಂದ ಬರೆಯುತಿದೆ!

                            - ಜಿ. ಎಸ್. ಶಿವರುದ್ರಪ್ಪ
                              ' ಸಾಮಗಾನ ' (೧೯೫೧)
 ತೊರೆಯ ಹಂಬಲ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ?
ಕಡಲನು ಕೂಡಬಲ್ಲೆನೇ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗೆಂದೂ ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೊ ಅದು
ಎಂತಿರುವುದೊ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೇ ಒಂದು ದಿನ?

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ!
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ!
ಮುನ್ನೀರಂತೆ
ಅಪಾರವಂತೆ
ಕಡಲನು ಕಾಣಬಲ್ಲೆನೇ ಒಂದು ದಿನ.
ಅದರೊಳು ಕರಗಲಾರೆನೇ ಒಂದು ದಿನ.

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು!
ಎಂದಿಗಾದರೂ ಕಾಣದ ಕಡಲಿಗೆ
ಸೇರಬಲ್ಲೆನೇನು
ಆ ಪುಣ್ಯವೆಂದಿಗೊ
ಕಾಲವೆಂದಿಗೊ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೆ ನಾನು
ಕಡಲ ನೀಲಿಯೊಳು
ಕರಗಬಹುದೆ ನಾನು?

                             - ಜಿ. ಎಸ್. ಶಿವರುದ್ರಪ್ಪ
                             ' ಚೆಲುವು-ಒಲವು ' (೧೯೫೩)


ಬುಧವಾರ, ಡಿಸೆಂಬರ್ 18, 2013

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿಮಗೆ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ,
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

                                     - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)


ಕಾರಣ ಯಾರಿಗೆ ಗೊತ್ತು?

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು.

ಥಳಥಳಿಸುವ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರುವ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು-ದೇವರು ಬಲ್ಲ!-ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳಕಿಲ್ಲ.
ಕಾರಣ ಯಾರಿಗೆ ಗೊತ್ತು?

                                - ಕೆ. ಎಸ್. ನರಸಿಂಹಸ್ವಾಮಿ
                                                                                     ' ಇರುವಂತಿಗೆ '
ಮೌನ 

ಏಕೆ ಮೌನವ ತಾಳಿದೆ 
ನೀನೇಕೆ ಮಾತನು ಹೂಳಿದೆ
ನಾಳೆಗೊಂದು ಬಾಳಿದೆ 
ಎಂದು ಲೋಕವು ನಂಬಿದೆ. 

ಕಾಳಮೇಘವು ತುಂಬಿದೆ, ನಿಜ,
ಸೂರ್ಯನನ್ನೇ ನುಂಗಿದೆ,
ಆದರೂ ಮಳೆ ಬರಲಿದೆ,
ಬಾನು ತಿಳಿಯಲು ಕಾದಿದೆ, ಅದ 
ನಂಬಬಾರದು ಏತಕೆ?
ಬರಿದೆ ಅಳುವುದೆ ಭೂತಕೆ?

ಬೇಸಗೆಯು ಬರಬಾರದೆ?
ಬಿಸಿಲು ಮಳೆಯನು ತಾರದೆ?
ಬಿಸಿಲ ಸುಮ್ಮನೆ ದೂರದೆ 
ಸುಮ್ಮನೇ ಇರಬಾರದೆ?
ಪೈರು ಬಾರದು ಎಂದು ಅಳುವುದೆ?
ಕಾಳು ನೆಲದಲ್ಲೂರದೆ?

ಬೆಂಕಿಪ್ರಳಯದ ಊಹೆಗೆ 
ನೀನು ಉರಿವುದೆ ಪ್ರೇಯಸಿ?
ನನ್ನ ನಂಬದೆ ನೀನು ಅಳುವುದೆ?
ನನ್ನ ಸುಮ್ಮನೆ ನೋಯಿಸಿ?

                                 - ಸುಮತೀಂದ್ರ ನಾಡಿಗ 
ನಾನು ಬರೆಯುತ್ತೇನೆ  

ನಾನು ಬರೆಯುತ್ತೇನೆ
ಕಾಳ ರಾತ್ರಿಗಳಲ್ಲಿ ಬಂದು ಕದ ತಟ್ಟುವ 
ಧ್ವನಿಗಳನ್ನು ಕುರಿತು. 
ನಾನು ಬರೆಯುತ್ತೇನೆ
ಬಿರುಗಾಳಿಯಲ್ಲಿ ಕಡಲಿನ ಮೇಲೆ
ಹೊಯ್ದಾಡುವ ದೋಣಿಗಳನ್ನು ಕುರಿತು. 

ನಾನು ಬರೆಯುತ್ತೇನೆ
ನೆಲದಾಳಗಳಲ್ಲಿ ಮಲಗಿರುವ ಮೂಳೆಗಳ
ನಿಟ್ಟುಸಿರನ್ನು ಕುರಿತು. 

ನಾನು ಬರೆಯುತ್ತೇನೆ
ಸಂಜೆಗತ್ತಲಿನಲ್ಲಿ ಕರಗುತ್ತಿರುವ
ಉಜ್ವಲವಾದ ಹಗಲುಗಳನ್ನು ಕುರಿತು.

ನಾನು ಬರೆಯುತ್ತೇನೆ
ಶತಮಾನಗಳ ಕತ್ತಲನ್ನೊಡೆದು
ಮೆತ್ತಗೆ ತಲೆಯೆತ್ತುವ ಮೊಳಕೆಗಳನ್ನು ಕುರಿತು.

ನಾನು ಬರೆಯುತ್ತೇನೆ
ಕೊನೆಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನ್ನು ಕುರಿತು.
ಅರಳುವ ಕನಸುಗಳನ್ನು ಕುರಿತು
 ಉರುಳುವ ಚಕ್ರಗಳನ್ನು ಕುರಿತು  
ನಾನು ಬರೆಯುತ್ತೇನೆ, ನನ್ನ 
ಒಂದೊಂದೇ ಎಲೆಯುದುರಿ
ನಾನು ಬೋಳಾಗುವುದನ್ನು ಕುರಿತು. 

                                  - ಜಿ. ಎಸ್. ಶಿವರುದ್ರಪ್ಪ
                                    ' ಚಕ್ರಗತಿ ' (೧೯೯೨)

ಸೋಮವಾರ, ಡಿಸೆಂಬರ್ 16, 2013

ಗೆಳೆಯರು 


ಗೆಳೆಯರಿರಲಿ ಈ ಬಾಳಿನಲಿ
 ಗೆಳೆಯರಿರಲಿ ಕೊನೆ ತನಕ
ಹಗುರ ಹೃದಯ, ತಿಳಿ ಮನಸಿರಲಿ
ತೊರೆದು ಎಲ್ಲ ತವಕ

ದುಗುಡ ಮಡುವಾದ ಮೋಡವ ತಡೆದು
ಕಂಬನಿಗರೆಸುವ ಬೆಟ್ಟಗಳು
ಮನಸಿಗೆ ಮೆತ್ತಿದ ಕೊಳೆಯನು ತೊಳೆಯಲು
ನಿರ್ಮಲ ಸ್ನಾನಘಟ್ಟಗಳು

ಹರಿವ ನೀರು ಹೊಲಗದ್ದೆಗೆ ಸೇರಲು
ಹಳ್ಳ ನಾಲೆ ಕೆರೆ ಕೊಳ್ಳಗಳು
ಬೆಳೆದ ದವಸವನು ಕೇರುವ ಮೊರಗಳು
ಕಾಳನು ಅಳೆಯುವ ಬಳ್ಳಗಳು

ಶ್ರಮದ ಸಾಧನೆಗೆ ಬೆನ್ನ ಚಪ್ಪರಿಸಲು
ತೊಡಿಸಲು ಹಿಗ್ಗಿನ ಮಾಲೆ
ಬೀಗಿ ಉಬ್ಬಿದರೆ ಚುಚ್ಚಿ ಎಚ್ಚರಿಸಲು
ಬಿದ್ದರೆ ಎತ್ತಲು ಮೇಲೆ

                                   - ಬಿ. ಆರ್. ಲಕ್ಷ್ಮಣರಾವ್
ಅನಾದಿಗಾನ  


 ಅನಾದಿಗಾನವು ನಾನು - ಹೇ
 ಅನಂತಗಾಯಕನೇ - ನಿನ್ನ ll ಪ ll 

ರಚಿಸಿದೈ ಈ ಗಾನಮಾಧುರ್ಯಕಾಗಿ ನೀಂ
ವಿಶ್ವವೆಂಬುವ ಮಹಾ ನಿನ್ನ ವೀಣೆಯನು;
ನಿನ್ನ ಸ್ವರ್ಶನಕೆ ಆದಿಯಲಿ ಆ ಜಡವೀಣೆ
ಹಾಡತೊಡಗಿತು ನನ್ನ ಜೀವಗಾನವನು! 

ಈ ಗಾನವನು ಕೇಳಿ ರವಿಚಂದ್ರತಾರಾಳಿ
ರಾಸಲೀಲೆಗೆ ತೊಡಗಿದವು ಹರ್ಷ ತಾಳಿ!
ಕಾಲದೇಶಾಕಾಶ ಸತ್ಯ ಮಿಥ್ಯೆಗಳೆಲ್ಲ
ಆನಂದ ಸ್ಫೂರ್ತಿಯಲಿ ಮೈತಿಳಿದುವೆಲ್ಲ!

ಗಾನವಾನಂದದಲಿ ಗಾಯಕನ ರಮಿಸುತಿದೆ;
ಚಿರಮಧುರ ನೂತ್ನವಾ ಗೀತರಸಪಾನ;
ಗಾನಗಾಯಕರೊಲ್ಮೆ ತೀರ್ಥದಲಿ ಲಭಿಸುತಿದೆ
ಕಲ್ಪಬುದ್ಭುದಗಳಿಗೆ ಸಂಸಾರಸ್ನಾನ!  

 
                                            - ಕುವೆಂಪು
                                              ' ಅಗ್ನಿಹಂಸ '