ಬಾ ಬೇಗನೆ!
ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ;
ಎಲ್ಲಿ ಹೋದೆಯೊ, ಇನಿಯ? ಬಾ ಬೇಗನೆ.
ಮಬ್ಬು ಕವಿದಿದೆ ಮನಕೆ; ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ: ಬಾ ಬೇಗನೆ!
ಮುಳುಗಿದುದು ರವಿ; ಓಕುಳಿಯ ಚೆಲ್ಲಿದುದು ಸಂಧ್ಯೆ;
ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ.
ಕತ್ತಲೆಯ ಕರಿನೆಳಲೊಡನೆ ಮೂಡಿದುವು ತಾರೆ;
ಹಬ್ಬಿಹುದು ಮರುಭೂಮಿಯಂತೆ ಶಾಂತಿ!
ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ
ಹಾದಿ ನೋಡುತಲಿಹೆನು, ಬಾ ಬೇಗನೆ.
ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು
ಮುದಗೊಳಿಸು, ಹೃದಯೇಶ, ಬಾ ಬೇಗನೆ.
- ಕುವೆಂಪು
' ಪ್ರೇಮ ಕಾಶ್ಮೀರ '
1 ಕಾಮೆಂಟ್:
ಧನ್ಯವಾದಗಳು , ಎಲ್ಲ ಕವನಗಳನ್ನು ನಮಗೆ ತಲುಪಿಸಿದ ಈ ಕನಸೆಂಬ ನನಸಿಗೆ
ಕಾಮೆಂಟ್ ಪೋಸ್ಟ್ ಮಾಡಿ