ಬುಧವಾರ, ಜೂನ್ 8, 2011

ತೆರೆದಿದೆ ಮನೆ, ಓ, ಬಾ ಅತಿಥಿ !

ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ,
ಓ ನವಜೀವನ ಅತಿಥಿ!

ಆವ ರೂಪದಲಿ ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು  ಬಹೆಯ?
ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರು ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,
             ಬಾನಾಗಿ,
                             ಗಿರಿಯಾಗಿ,
                                     ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ  
ಬಾ, ಅತಿಥಿ!
ತೆರೆದಿದೆ ಮನೆ, ಓ  ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!

                                    - ಕುವೆಂಪು
                                        ' ಪ್ರೇಮ ಕಾಶ್ಮೀರ '

ಕಾಮೆಂಟ್‌ಗಳಿಲ್ಲ: